FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday, 26 September 2014

27-09-2014
-->
ಕನ್ನಡ ಪಠ್ಯ ಪುಸ್ತಕಗಳನ್ನು ಕಾಸರಗೋಡಿನಲ್ಲಿ ಮುದ್ರಿಸಿ-ಕನ್ನಡ ಅಧ್ಯಾಪಕ ಸಂಘ.
ಇತ್ತೀಚೆಗೆ ಶಿಕ್ಷಣ ಇಲಾಖೆಯು ಮುದ್ರಿಸಿ ವಿತರಿಸಿದ ಹೈಯರ್ ಸೆಕಂಡರಿ ವಿಭಾಗದ ಕನ್ನಡ ಐಚ್ಛಿಕ ವಿಷಯದ ಪುಸ್ತಕದಲ್ಲಿ ಅನೇಕ ದೋಷಗಳು ನುಸುಳಿ ಬಂದಿದ್ದು ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಭಾಷೆ ತಿಳಿಯದ ಸ್ಥಳದಲ್ಲಿ ಮುದ್ರಣಗೊಳ್ಳುವುದೇ ಇದಕ್ಕೆ ಕಾರಣವೆಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಉತ್ಕೃಷ್ಟಾಗಿ ನಿರ್ಮಿಸಿಕೊಟ್ಟ ಪುಸ್ತಕವನ್ನು ಅತಿ ಕೆಟ್ಟದಾಗಿ ಮುದ್ರಿಸಿ ವಿತರಿಸಿದುದು ಕನ್ನಡಿಗರಿಗೇ ಮಾಡಿದ ಅವಮಾನವೆಂದು ಸಂಘಟನೆ ತನ್ನ ನಿಲುವನ್ನು ಅಧಿಕೃತರಿಗೆ ವ್ಯಕ್ತಪಡಿಸಿದೆ .ಇದರ ಕುರಿತು ಸರಕಾರಕ್ಕೆ ದೂರು ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ನಡೆಯುವ ರಾಜ್ಯಸರಕಾರದ ಪಠ್ಯಪುಸ್ತಕ ನಿರ್ಮಾಣ ಕಾರ್ಯಾಗಾರದಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ನಿರ್ಮಿಸಿ ಅದರ ಶಿಫಾರಸಿನಂತೆ ಆಯ್ಕೆ ಪ್ರಕ್ರಿಯೆಯನ್ನು ಮಾಡಬೇಕೆಂದು ಇಲಾಖೆಯನ್ನು ಒತ್ತಾಯಿಸಲಾಗಿದೆ. ಯಾಕೆಂದರೆ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಮಾತ್ರ ಕನ್ನಡ ಬಲ್ಲ ಶಿಕ್ಷಣಾಧಿಕಾರಿಗಳಿದ್ದಾರೆ. ಕೇರಳದ ಯಾವ ಪ್ರದೇಶದಲ್ಲಿಯೂ ಈ ವ್ಯವಸ್ಥೆ ಅಸ್ಥಿತ್ವದಲ್ಲಿಲ್ಲ. ಎಸ್.ಸಿ..ಆರ್.ಟಿ.ಯಲ್ಲಿ ಕನ್ನಡ ಬಲ್ಲ ಅಧಿಕಾರಿಗಳ ಕೊರತೆಯಿಂದ ಆಗುವ ಅನೇಕ ಪ್ರಮಾದಗಳಿಗೆ ಇದು ಪರಿಣಾಮಕಾರಿಯಾದ ಮಾರ್ಗವಾಗಿದೆಯೆಂದು ಡಿ.ಪಿ..ಯವರಿಗೆ ಮನವರಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದೆಂದು ಕನ್ನಡಿಗ ಡಿ.ಪಿ..ಗೋಪಾಲಕೃಷ್ಣ ಭಟ್ ಎಡನೀರು ಇವರು ಭರವಸೆ ನೀಡಿದ್ದಾರೆ. ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷ ಟಿ.ಡಿ.ಸದಾಶಿವರಾವ್ ನುಡಿದರು. ಅವರು ಜಿ.ಎಸ್.ಬಿ.ಎಸ್.ಕುಂಬಳೆಯಲ್ಲಿ ನಡೆದ ಸಂಘಟನೆಯ ಕೇಂದ್ರ ಸಭೆಯಲ್ಲಿ ಮಾತನಾಡುತ್ತಿದ್ದರು. ಕನ್ನಡ ಪಠ್ಯಪುಸ್ತಕ, ಅಧ್ಯಾಪಕ ಪಠ್ಯ ಶಿಕ್ಷಕರ ಕೈ ಸೇರದ ಹಿನ್ನಲೆಯಲ್ಲಿ ನಡೆದ ಕ್ಲಸ್ಟರ್ ಬಹಿಷ್ಕಾರವನ್ನು ಯಶಸ್ವಿಗೊಳಿಸಿ ಸರಕಾರದ ಗಮನಸೆಳೆಯುಂತೆ ಮಾಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಕೇಂದ್ರದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ, ಮಂಜೇಶ್ವರ ಘಟಕಾಧ್ಯಕ್ಷ ಶ್ರೀನಿವಾಸ ರಾವ್ ಎ, ಮಂಜೇಶ್ವರ ಘಟಕದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು, ಕುಂಬಳೆ ಘಟಕದ ಪ್ರದೀಪ್ ಕುಮಾರ್ ಶೆಟ್ಟಿ, ಸತ್ಯನಾರಾಯಣ ಶರ್ಮಾ, ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು. ದಿನಾಂಕ 30ರಂದು ತಿರುವನಂತಪುರದಲ್ಲಿ ಶಿಕ್ಷಣ ಸಚಿವರು ಕರೆದ ಅಂಗೀಕೃತ ಅಧ್ಯಾಪಕ ಸಂಘಟನೆಗಳ ಸಭೆಯಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಮತ್ತು ನಿವೇದನೆಗಳ ರೂಪುರೇಷೆಯನ್ನು ತಯಾರಿಸಲಾಯಿತು.

Wednesday, 24 September 2014

24-09-2014
ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಯೋಗದಿಂದ ಡಿ.ಪಿ.ಐ.ಯವರಿಗೆ ಮನವಿ.
ತಿರುವನಂತಪುರ, ಕಾಸರಗೋಡು ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಕುರಿತು ಸಮಗ್ರ ಚಿತ್ರಣ ನೀಡಲು ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಯೋಗವೊಂದು ತಿರುವನಂತಪುರಕ್ಕೆ ಹೋಗಿ ಡಿ.ಪಿ.ಐ.ಯವರನ್ನು ಭೇಟಿ ಮಾಡಿ , ಶೈಕ್ಷಣಿಕ ವಲಯದಲ್ಲಿ ಈಗ ಇರುವ ಸಮಸ್ಯೆ ಕನ್ನಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪರಿಹಾರೋಪಾಯಗಳ ಕುರಿತು ಸಮಗ್ರ ಚರ್ಚೆ ನಡೆಸಿತು. ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಸ್ಥಿತಿವಿಶೇಷತೆಗನುಸರಿಸಿ ಪಠ್ಯ ಪುಸ್ತಕ ನಿರ್ಮಾಣ, ಭಾಷಾಂತರ ಮೊದಲಾದವುಗಳಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ವಿಶ್ಲೇಷಣೆ ನಡೆಸಲಾಯಿತು.ಎಸ್.ಸಿ.ಆರ್.ಟಿ. ನೇತೃತ್ವದಲ್ಲಿ ನಡೆಯುವ ವಿವಿಧ ಕಾರ್ಯಾಗಾರಗಳ ಮೇಲ್ನೋಟ ಮತ್ತು ಬೆಂಬಲ  ವ್ಯವಸ್ಥೆಯ ಕುರಿತು ಚಿಂತನೆ ನಡೆಸಲಾಯಿತು. ನಿಯೋಗದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸ ರಾವ್,ಕೇಂದ್ರ ಸಮಿತಿ ಸದಸ್ಯರಾದ ರಾಜಗೋಪಾಲ  ಸಹಿತ ಹತ್ತು ಮಂದಿ ಭಾಗವಹಿಸಿದ್ದರು.
 

Monday, 22 September 2014

22-09-2014
1.ಕನ್ನಡ ಮಾಧ್ಯಮ ಪಠ್ಯ ಪುಸ್ತಕದ ಭಾಗ 1 ಇವುಗಳ ಎಲ್ಲಾ ಅಧ್ಯಾಪಕ ಪಠ್ಯ ಎಸ್.ಇ.ಆರ್.ಟಿ.ಸೈಟಲ್ಲಿ  ಪ್ರಕಟಿಸಿದ್ದಾರೆ. ಪುಸ್ತಕವನ್ನು ಆದಷ್ಟು ಬೇಗನೆ ಕಾಸರಗೋಡು ಕನ್ನಡ ಮಾಧ್ಯಮ ಅಧ್ಯಾಪಕರಿಗೆ ಒದಗಿಸುತ್ತೇವೆಂದು ಕರಿಕ್ಯುಲಂ ಹೆಡ್ ಶ್ರೀ  ರವೀಂದ್ರನ್ ನಾಯರ್  ತಿಳಿಸಿದ್ದಾರೆ . ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಅಧಿಕೃತರು ವಿನಂತಿಸಿದ್ದಾರೆ.

2. ದಸರಾ ನಾಡಹಬ್ಬದ ಆಚರಣೆಗೆ ಸಂಬಂಧಿಸಿ ಮಾರ್ಗದರ್ಶಿಯೊಂದನ್ನು ಸಿದ್ಧಗೊಳಿಸಿ ಜಿಲ್ಲಾ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಿಕೊಡಲಾಗಿದೆ . ಶಿಕ್ಷಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನಮ್ಮ ಬ್ಲೋಗಿನಲ್ಲಿಯೂ ಮಾಹಿತಿ ಲಭ್ಯವಿದೆ. 

Sunday, 21 September 2014


-->



ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ದಸರಾ ನಾಡಹಬ್ಬವನ್ನು ನವರಾತ್ರಿಯ ಯಾವುದಾದರೂ ಒಂದು ದಿನಗಳಲ್ಲಿ ಆಚರಿಸಬಹುದಾಗಿದೆ.


No. D2/9611/2014 Office of the Deputy Director, Education Kasaragod, Dated: 19.08.2014


As decided in District Level Committee of Linguistic Minorities, the Headmasters of all Kannada Medium Schools are requested to celebrate ‘Dasara Nadahabba’ the festival of knowledge in Kannada Medium Schools one day during Navarathri festival .
Yours faithfully,
Sd/-
DEPUTY DIRECTOR, EDUCATION,
KASARAGOD

ದಸರಾ ನಾಡಹಬ್ಬ2014,ಆಚರಣೆಯ ಮಾರ್ಗದರ್ಶಿ

ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಆಚರಿಸಬೇಕಾದ ದಸರಾ ನಾಡಹಬ್ಬದ ಕುರಿತು ಕಿರುನೋಟ.



ರೂಪು ರೇಷೆ ತಯಾರಿ- ಕೇರಳ ಪ್ರಾಂತ್ಯಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮತ್ತುಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು.

ದಸರಾ ನಾಡಹಬ್ಬ2014,ಆಚರಣೆಯ ಮಾರ್ಗದರ್ಶಿ.
ಮುನ್ನುಡಿ
ಕಾಸರಗೋಡಿನಲ್ಲಿ ಲಕ್ಷಾಂತರ ಕನ್ನಡಿಗರು ಕನ್ನಡ ಸಂಸ್ಕೃತಿಯ ವಾಹಕರಾಗಿ ಇಂದಿಗೂ ನೆಲೆನಿಂತಿರುವುದು ನಿಜಕ್ಕೂ ಕೇರಳ, ಕರ್ನಾಟಕ ಜನತೆಯ ಮತ್ತು ಸರಕಾರದ ಕ್ರಿಯಾತ್ಮಕ ಸಹಕಾರದಿಂದಾಗಿದೆ.ಕಲೆ,ಸಂಸ್ಕೃತಿ ನಿಂತ ನೀರಲ್ಲ.ಕಾಲಾನುಕಾಲಕ್ಕೆ ಬದಲಾವಣೆಗೊಳ್ಳುತ್ತದೆ.ದೃಶ್ಯ ಮಾಧ್ಯಮಗಳು,ಪತ್ರಿಕೆಗಳು ವಾಣಿಜ್ಯೋದ್ಧೇಶಗಲಿಂದ ಪ್ರೇರಿತವಾಗಿ ಕೆಲವೊಮ್ಮೆ ಜನರ ಸಾಂಪ್ರದಾಯಿಕ ಕಲೋಪಾಸನೆಗೆ ಸ್ಪಂದಿಸದೇ ಹೋಗಬಹುದು.ಆದರೆ ಸಾಂಪ್ರದಾಯಿಕ ಸಾಹಿತ್ಯ, ಕಲೆ,ಶಾಸ್ತ್ರೀಯ ಕಲೆಗಳು ಜನಸಾಮಾನ್ಯರ ಮನೆಮಾತಾಗಬೇಕಾದ ಅನಿವಾರ್ಯತೆಯಿದೆ.ಕೇಂದ್ರಸರಕಾರವು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಆದರೆ ಯಾವುದೇ ಭಾಷೆ ಉನ್ನತ ಸ್ಥಾನಕ್ಕೇರಬೇಕಾದರೆ ಅದು ಜನಸಾಮಾನ್ಯರ ಸೊತ್ತಾಗಬೇಕು.ಸಾಂಪ್ರದಾಯಿಕ ಕಲೆ ಸಾಹಿತ್ಯ ಜನಪದ ಸಂಪತ್ತು ಪ್ರತಿಯೊಬ್ಬ ಕನ್ನಡಿಗನ ಹೃದಯಕ್ಕೆ ಹತ್ತಿರವಾಗಬೇಕು.ಈ ನಿಟ್ಟಿನಲ್ಲಿ ರಾಜ್ಯಗಳು ಆಚರಿಸುವ ನಾಡಹಬ್ಬಗಳು ಮಹತ್ತರ ಕಾರ್ಯವೆಸಗುತ್ತಿವೆ. ದಸರಾ ನಾಡಹಬ್ಬವೂ ಇದಕ್ಕೆ ಹೊರತಾಗಿಲ್ಲ. ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಯ ಆಧಾರದಲ್ಲಿ ನಾವು ಇಲ್ಲಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಇದು ಅನಿವಾರ್ಯವಾಗಿದೆ.
ಈ ವರ್ಷ ದಸರಾ ನಾಡಹಬ್ಬವನ್ನು ನವರಾತ್ರಿಯ ಯಾವುದಾದರೊಂದು ದಿನ ಆಚರಿಸಬೇಕೆಂಬ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಸುತ್ತೋಲೆಗೆ ನಾವು ಸಕಾರಾತ್ಮಕ ಪ್ರತಿಕ್ರಿಯೆ ನೀಡಬೇಕಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮತ್ತು ಕನ್ನಡಾಭಿಮಾನಿ ಕೇರಳಿಗರಿಗೆ ಕನ್ನಡ ಸಂಸ್ಕೃತಿಯ ಸಾರವನ್ನು ಪರಿಚಯಿಸಲು ಕೆಲವು ಕಾರ್ಯಕ್ರಮಗಳನ್ನು ಮುಂದಿಡುತ್ತಿದ್ದೇವೆ.
ಉದ್ದೇಶಗಳು - *ಮಕ್ಕಳಿಗೆ ಕನ್ನಡ ಸಾಹಿತ್ಯ,ಸಂಸ್ಕೃತಿಯ ಹಿರಿಮೆಯನ್ನು ತಿಳಿಸುವುದು.
*ಮಕ್ಕಳಿಗೆ ಸಾಹಿತ್ತಿಕ ರಚನೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವುದು.
*ಜನಪದ ಕಲೆಗಳ ಕುರಿತು ಜಾಗೃತಿ ಮೂಡಿಸುವುದು.
*ಕನ್ನಡ ಸಾರಸ್ವತ ಲೋಕದೆಡೆಗೆ ಜನರ ಚಿತ್ತ ಸೆಳೆಯುವಂತೆ ಮಾಡುವುದು.
*ಸ್ಥಳೀಯ ಜನಪದ ಕಲಾವಿದರನ್ನು ಗೌರವಿಸುವುದು.
*ಸ್ಥಳೀಯ ಸಾಂಸ್ಕೃತಿಕ ರಾಯಭಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು.
*ಮಕ್ಕಳನ್ನು ಓದುವ ಕಡೆಗೆ ಆಕರ್ಷಿಸುವಂತೆ ಮಾಡುವುದು.
*ಮಕ್ಕಳ ಸೃಜನಶೀಲ ಬರವಣಿಗೆಯನ್ನು ಪ್ರೋತ್ಸಾಹಿಸುವುದು.
*ಮಕ್ಕಳಿಗೆ ಕಲೆ, ಸಂಸ್ಕೃತಿಗಳಲ್ಲಿ ಒಲವು ಮೂಡುವಂತೆ ಪ್ರೇರೇಪಿಸುವುದು.


ಶಾಲೆಯಲ್ಲಿ ನಡೆಸಬಹುದಾದ ಸ್ಪರ್ಧೆಗಳು/ಚಟುವಟಿಕೆಗಳು.
ಕಿರಿಯ ಪ್ರಾಥಮಿಕ ವಿಭಾಗ – ಸಂಗೀತ ಕುರ್ಚಿ, ಮಿಠಾಯಿ ಹೆಕ್ಕುವುದು, ಪುಗ್ಗೆ ಒಡೆಯುವುದು, ಅಭಿನಯ ಗೀತೆ, ಕಥೆ ಹೇಳುವುದು, ಜಾನಪದ ಗೀತೆ, ನಾಡಗೀತೆ ಇತ್ಯಾದಿ.
ಹಿರಿಯ ಪ್ರಾಥಮಿಕ ವಿಭಾಗ –ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಗೋಣಿಚೀಲ ಓಟ,ಮಡಕೆ ಒಡೆಯುವುದು,ಹುಲಿನಾಟ್ಯ, ಚಿತ್ರ ನೋಡಿ ಕಥೆ ಬರೆಯುವುದು,ಚಿತ್ರ ನೋಡಿ ಕವಿತೆ ಬರೆಯುವುದು,ಜಾನಪದ ಗೀತೆ, ನಾಡಗೀತೆ ಇತ್ಯಾದಿ.
ಪ್ರೌಢ ಶಾಲಾ ವಿಭಾಗ - ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಗೋಣಿಚೀಲ ಓಟ, ಸುಂದರಿಗೆ ಬೊಟ್ಟು ಹಾಕುವುದು, ಹಗ್ಗ ಜಗ್ಗಾಟ,ಹುಲಿನಾಟ್ಯ,ಆಶು ಕವಿತೆ,ಆಶುಭಾಷಣ, ಕಥಾರಚನೆ, ತತ್ವಪದ,ಭಾಮಿನಿಷಟ್ಪದಿ ಕಾವ್ಯವಾಚನ.ಇತ್ಯಾದಿ
ಹೈಯರಿ ಸೆಕಂಡರಿ ವಿಭಾಗ - ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಮಡಕೆಒಡೆಯುವುದು, ಸುಂದರಿಗೆಬೊಟ್ಟು ಹಾಕುವುದು, ಹಗ್ಗ ಜಗ್ಗಾಟ,ಹುಲಿನಾಟ್ಯ,ಆಶು ಕವಿತೆ,ಆಶುಭಾಷಣ, ಕಥಾರಚನೆ, ಮಂಕುತಿಮ್ಮನ ಕಗ್ಗದ ವಾಚನ,ಭಾಮಿನಿಷಟ್ಪದಿ ಕಾವ್ಯವಾಚನ.ಇತ್ಯಾದಿ
ಸಂಗೀತ ಕುರ್ಚಿ - ಮಕ್ಕಳ ಸಂಖ್ಯೆಗಿಂತ ಐದಾರು ಕುರ್ಚಿಗಳು ಕಡಿಮೆ ಇರಬೇಕು. ಅವುಗಳನ್ನು ವೃತ್ತಾಕಾರದಲ್ಲಿ ಇಡುವುದು. ಶಿಕ್ಷಕರು ಹಿತವಾದ ಸಂಗೀತವನ್ನು ಕೇಳುವಂತೆ ಮಾಡಬೇಕು. ಮಕ್ಕಳು ವೃತ್ತಾಕಾರದಲ್ಲಿ ಓಡಬೇಕು. ಸಂಗೀತ ನಿಲ್ಲಿಸಿದ ಕೂಡಲೇ ತನ್ನ ಎದುರಿಗಿರು ಕುರ್ಚಿಯಲ್ಲಿ ಮಕ್ಕಳು ಕುಳಿತುಕೊಳ್ಳಬೇಕು.ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ಬಂದು ಕೂರಬಾರದು. ಕುಳಿತುಕೊಳ್ಳಲು ಕುರ್ಚಿ ಸಿಗದ ಮಕ್ಕಳು ಆಟದಿಂದ ನಿರ್ಗಮಿಸಬೇಕಾಗುತ್ತದೆ. ಮುಂದೆ ಮಕ್ಕಳ ಸಂಖ್ಯೆಗಿಂತ ಒಂದೊಂದು ಕುರ್ಚಿಯನ್ನು ಕಡಿಮೆ ಮಾಡುತ್ತಾ ಆಟವನ್ನು ಮುಂದುವರಿಸಬೇಕು; ಕೊನೆಕೊನೆಗೆ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಕುರ್ಚಿಯೂ ಕಡಿಮೆಯಾಗುತ್ತದೆ.ಅಂತಿಮವಾಗಿ ಉಳಿದವನನು/ಳು ಸಂಗೀತ ಕುರ್ಚಿ ಆಟದಲ್ಲಿ ವಿಜಯಿ ಎ೦ದು ಪರಿಗಣಿಸಲಾಗುತ್ತದೆ.
ಮಿಠಾಯಿ ಹೆಕ್ಕುವುದು - ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು, ಸ್ವಲ್ಪ ಮಿಠಾಯಿಯನ್ನು ಮೊದಲೇ ಸಿದ್ದಗೊಳಿಸಿರಬೇಕಾಗುತ್ತದೆ. ವೃತ್ತದ ಮಧ್ಯಲ್ಲಿ ನಿಂತ ಶಿಕ್ಷಕರು ಮಿಠಾಯಿಯನ್ನು ಚೆಲ್ಲಬೇಕು. ಎಲ್ಲಾ ಮಕ್ಕಳು ಅದನ್ನು ಹೆಕ್ಕಬೇಕು. ಯಾರಿಗೆ ಅತೀ ಹೆಚ್ಚು ಮಿಠಾಯಿ ಸಿಕ್ಕಿದೆಯೋ ಅವರನ್ನು ವಿಜಯಿಯೆಂದು ಗುರಿತಿಸಬೇಕು.
ಪುಗ್ಗೆ ಒಡೆಯುವುದು - ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು,ಪ್ರತಿಯೊಬ್ಬ ಸ್ಪರ್ಧಾರ್ಥಿಗೆ ಮೂರು ಪುಗ್ಗೆಯಂತೆ ಮೊದಲೇ ಸಿದ್ದಗೊಳಿಸಿರಬೇಕಾಗುತ್ತದೆ. ಶಿಕ್ಷಕರು ವೃತ್ತದ ಮಧ್ಯದಲ್ಲಿ ನಿಂತು ವಿಶಿಲ್ ಊದಿ ಸದ್ದು ಮಾಡಿದ ತಕ್ಷಣ ಮಕ್ಕಳು ತಮ್ಮ ಪುಗ್ಗೆಯನ್ನು ಊದಿ ದೊಡ್ಡದಾಗಿಸಿ ಒಡೆಯಬೇಕು. ಯಾರು ಮೊದಲಿಗೆ ಮೂರು ಪುಗ್ಗೆಗಳನ್ನು ಊದಿ ಒಡೆಯುತ್ತಾರೆಯೋ ಅವನನ್ನು/ಳನ್ನು ವಿಜಯಿಯೆಂದು ಗುರುತಿಸಲಾಗುತ್ತದೆ.
ಲಿಂಬೆ ಚಮಚ ಓಟ- ಸಾಮಾನ್ಯ ಓಟ ಸ್ಪರ್ಧೆಯಲ್ಲಿ ಪ್ರಾರಂಭಿಸುವಂತೆ ಓಟಕ್ಕಾಗಿ ತಂಡಗಳನ್ನು ಮೊದಲೇ ಮಾಡಬೇಕು. ಸ್ಪರ್ಧಾರ್ಥಿಗಳು ಬಾಯಲ್ಲಿ ಚಮಚ ಅದರಲ್ಲೊಂದು ಲಿಂಬೆ ಹಣ್ಣು ಇರಿಸಬೇಕಾಗುತ್ತದೆ. ಮೊದಲಿಗೆ ತಲಪಿದವ ಜಯಶಾಲಿಯಾಗುತ್ತಾನೆ.
ಗೋಣಿಚೀಲ ಓಟ- ಗೋಣಿ ಚೀಲದ ಒಳಗೆ ಕಾಲುಗಳನ್ನು ಹಾಕಬೇಕು ಬಳಿಕ ಕುಪ್ಪಳಿಸಿಕೊಂಡು ನಿಗದಿತ ದೂರವನ್ನು ಕ್ರಮಿಸಬೇಕು. ಮೊದಲಿಗೆ ಗುರಿ ಮುಟ್ಟಿದವನು ವಿಜಯಿಯಾಗುತ್ತಾನೆ.ಇದನ್ನು ಸ್ಪರ್ಧಾರ್ಥಿಗಳ ಸಂಖ್ಯೆಗನುಸಾರವಾಗಿ ತಂಡಗಳಾಗಿ ಓಡಿಸಬೇಕಾಗುತ್ತದೆ.
ಮಡಕೆ ಒಡೆಯುವುದು- ನಿಗದಿತ ದೂರದಲ್ಲಿ ಎರಡು ಕಂಬಗಳನ್ನು ನೆಡಬೇಕು.ಅದಕ್ಕೆ ಕೋಲೊಂದನ್ನು ಭೂಸಮಾನಾಂತರವಾಗಿ ಜೋಡಿಸಬೇಕು. ಅದರ ಮಧ್ಯಕ್ಕೆ ಮಣ್ಣಿನ ಮಡಕೆಯೊಂದನ್ನು ಕಟ್ಟಬೇಕು.ಅದರೊಳಗೆ ಬಣ್ಣದ ನೀರನ್ನು ತುಂಬಿಸಿದರೆ ಇನ್ನೂ ಒಳ್ಳೆಯದು. ಮೊದಲೇ ಗುರುತಿಸಿದ ನಿರ್ಧಿಷ್ಟ ದೂರದಲ್ಲಿ ಸ್ಪರ್ಧಾರ್ಥಿಯನ್ನು ನಿಲ್ಲಿಸಬೇಕು. ಅವನ/ಅವಳ ಕಣ್ಣಿಗೆ ಬಟ್ಟೆ ಕಟ್ಟಿ ಕೈಯಲ್ಲೊಂದು ಕೋಲು ನೀಡಿ ಮೂರು ಸುತ್ತು ತಿರುಗಿಸಿ ಮಡಕೆಯಿರುವ ಕಡೆಗೆ ಮುಖ ಮಾಡಿ ಬಿಡಬೇಕು. ಕೋಲನ್ನು ಉಪಯೋಗಿಸಿಕೊಂಡು ಒಂದೇ ಹೊಡೆತಕ್ಕೆ ಮಡಕೆಯನ್ನು ಒಡೆಯಬೇಕು.ಹಲವಾರು ಸಲ ಕೋಲನ್ನು ಬೀಸುವಂತಿಲ್ಲ. ಹಾಗೆ ಮಡೆಕೆ ಒಡೆಯಲು ಸಾಧ್ಯವಾದವನು ವಿಜಯೆಯೆನಿಸಿಕೊಳ್ಳುತ್ತಾನೆ.
ಸುಂದರಿಗೆ ಬೊಟ್ಟು ಹಾಕುವುದು- ಗೋಡೆಯೊಂದರ ಪಕ್ಕದಲ್ಲಿ ಕರಿಹಲಗೆಯೊಂದನ್ನು ಇರಿಸಬೇಕು. ಚಾರ್ಟಿನಲ್ಲಿ ಸುಂದರಿಯೊಬ್ಬಳ ಮುಖದ ಚಿತ್ರವನ್ನು ಮೊದಲೇ ಸಿದ್ಧಗೊಳಿಸಬೇಕು.ಸುಂದರಿಗೆ ಬೊಟ್ಟುಹಾಕುವ ಸ್ಪರ್ಧಾಳು ನಿರ್ಧಿಷ್ಠ ಜಾಗದಲ್ಲಿ ನಿಂತುಕೊಳ್ಳಬೇಕು, ಶಿಕ್ಷಕರು ಆ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಯಲ್ಲೊಂದು ಸ್ಟಿಕ್ಕರ್ ನೀಡಬೇಕು. ಯಾರು ತಮ್ಮ ಕೈಗೆ ಸಿಕ್ಕಿದ ಸ್ಟಿಕ್ಕರನ್ನು ಸುಂದರಿಯ ಹಣೆಗೆ ಇಡುವರೋ ಅವರು ಜಯಶಾಲಿಗಳಾಗುತ್ತಾರೆ.
ಹುಲಿನಾಟ್ಯ- ಐದರಿಂದ ಏಳು ಮಂದಿಯ ತಂಡಗಳು ಈ ಪ್ರದರ್ಶನ ನೀಡಬಹುದು.ಸಂಗೀತ ವ್ಯವಸ್ಥೆ ಶಾಲೆಯಿಂದಲೇ ಮಾಡುವುದು ಒಳ್ಳೆಯದು.ಬಹಳಚೆನ್ನಾಗಿ ಹತ್ತು ನಿಮಿಷಗಳ ಪ್ರದರ್ಶನ ನೀಡಿದವರನ್ನು ಗುರುತಿಸಬೇಕು.
ಸಾಹಿತ್ತಿಕ ಸ್ಪರ್ಧೆಗಳು
ಅಭಿನಯ ಗೀತೆ - ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಇದನ್ನು ಏರ್ಪಡಿಸಬಹುದು.
ಕಥೆ ಹೇಳುವುದು- ಆಂಗಿಕ ಅಭಿನಯದೊಂದಿಗೆ ಜಾನಪದ ಕಥೆಯೋ, ನೀತಿಕಥೆಯೋ ಆಗಬಹುದು.
ಜಾನಪದ ಗೀತೆ - ಜನರಿಂದ ಜನರಿಗೆ ಹರಡಿ ಜಾನಪದ ಎ೦ದೆನಿಕೊಳ್ಳುತ್ತದೆ. ಅಂತಹ ಜಾನಪದ ಗೀತೆಳನ್ನು ಆಯ್ಕೆ ಮಾಡಿಕೊಳ್ಳಬೇಕು.
ನಾಡಗೀತೆ - ಭಾಷಾಭಿಮಾನ ಉಂಟುಮಾಡುವ ಅದೆಷ್ಟೋ ಗೀತೆಗಳು ಪ್ರಚಲಿತದಲ್ಲಿವೆ; ಇವು ಯಾವುದೂ ಅನ್ಯ ಭಾಷೆಗೆ ಯಾವ ವಿರೋಧವನ್ನೂ ಮಾಡದೆ ಶಾಂತ ಸ್ವರೂಪದಿಂದ ಭಾಷೆಯ ಅಂದಚಂದವನ್ನು ಬಣ್ಣಿಸುತ್ತವೆ. ಆದುದರಿಂದ ಇಂತಹ ಗೀತೆಗಳನ್ನು ಮಕ್ಕಳು ಹಾಡುವುದರಿಂದ ಭಾಷಾಪ್ರೇಮ ಉಂಟಾಗುವುದು.
ಚಿತ್ರ ನೋಡಿ ಕಥೆ ಬರೆಯುವುದು-ಕಥೆ ಬರೆಯಲಿರುವ ತಂತ್ರಗಳಲ್ಲಿ ಇದು ಒಂದು. ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ಚಿತ್ರ ನೋಡಿ ಕವಿತೆಬರೆಯುವುದು - ಕವಿತೆ ಬರೆಯಲಿರುವ ತಂತ್ರಗಳಲ್ಲಿ ಇದು ಒಂದು. ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ಆಶು ಕವಿತೆ - ಮಕ್ಕಳ ಸಭಾಕಂಪನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ಬಹಳ ಮಹತ್ವಪೂರ್ಣ ಪಾತ್ರವಹಿಸುತ್ತದೆ.
ಆಶುಭಾಷಣ - ಮಕ್ಕಳ ಸಭಾಕಂಪನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ಬಹಳ ಮಹತ್ವಪೂರ್ಣ ಪಾತ್ರವಹಿಸುತ್ತದೆ.
ಕಥಾರಚನೆ - ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ತತ್ವಪದ – ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ತತ್ವ ಪದಗಳಿಗೆ ವಿಶಿಷ್ಠ ಸ್ಥಾನವಿದೆ ಇದರ ಪರಿಚಯಕ್ಕಾಗಿ ಇದರ ಅಳವಡಿಕೆ ಮಾಡಬಹುದು.
ಭಾಮಿನಿಷಟ್ಪದಿ ಕಾವ್ಯವಾಚನ – ನಡುಗನ್ನಡ ಕಾವ್ಯಗಳ ಸೊಂದಯ್ರದ ಕುರಿತು ಮಕ್ಕಳಿಗೆ ಗೊತ್ತಾಗಬೇಕಾದರೆ ಕಾವ್ಯವಾಚನದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಬೇಕಾಗಿದೆ .ಅದಕ್ಕಾಗಿ ಹೀಗೂ ಪ್ರಯತ್ನಿಸಬಹುದು.
ಮಂಕುತಿಮ್ಮನ ಕಗ್ಗದ ವಾಚನ – ಕಗ್ಗ ಆಧುನಿಕ ನೀತಿ ಚಿಂತಾಮಣಿ ಇದರ ಪರಿಚಯವಾದರೆ ಒಳ್ಳೆಯದು.

ಸಾಂಸ್ಕೃತಿಕ ವೈಭವದ ಅಂಗವಾಗಿ ಸ್ಥಳೀಯ/ಆಮಂತ್ರಿತ ಕಲಾವಿದರಿಂದ ಹರಿಕಥೆ, ಬೊಂಬೆಯಾಟ, ಜಾದೂಪ್ರದರ್ಶನ, ಜಾನಪದ ನೃತ್ಯ ಮೊದಲಾದ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಬಹುದು.ಶಾಲಾ ಮಟ್ಟದಲ್ಲಿ ವಸ್ತು ಪ್ರದರ್ಶನ, ಬೊಂಬೆಗಳ ಪ್ರದರ್ಶನ ನಡೆಸಬಹುದು. ನಮ್ಮ ಸಾಂಪ್ರಾಯಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲಪಿಸುವ ಜವಾಬ್ದಾರಿಯನ್ನು ಹೊತ್ತ ನಾವು ನಮ್ಮ ಮಕ್ಕಳೊಂದಿಗೆ ನಾಡ ಹಬ್ಬದ ಆಚರಣೆಯನ್ನು ಮಾಡೋಣ.

******************************

Saturday, 20 September 2014

20-09-2014
ಕ್ಲಸ್ಟರ್ ಬಹಿಷ್ಕಾದಂತಹ ಮಹತ್ವದ ತೀರ್ಮಾನಕ್ಕೆ ಮನ್ನಣೆಯಿತ್ತು ಬಹಿಷ್ಕಾರದಲ್ಲಿ ಪಾಲ್ಗೊಂಡು ಅಧಿಕಾರಿಗಳ ಗಮನ ಸೆಳೆಯುವಂತೆ ಮಾಡಲು ಸಹಕರಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ ಕೃತಜ್ಞತೆಗಳು.

ಕ್ಲಸ್ಟರ್ ಬಹಿಷ್ಕಾರದಂದು ಮೂಡಿಬಂದ ಕೆಲವು ಘೋಷಗೀತೆಗಳಿವು.
ಜಯಕಾರ ಜಯಕಾರ                                                       
ಕನ್ನಡ ಸಂಘಕೆ ಜಯಕಾರ
ಧಿಕ್ಕಾರ ಧಿಕ್ಕಾರ 
ಮಲತಾಯಿ ಧೋರಣೆಗೆ ಧಿಕ್ಕಾರ 
ತರಲಿಲ್ಲ ತರಲಿಲ್ಲ
ಕನ್ನಡ ಪುಸ್ತಕ ತರಲಿಲ್ಲ
ಕೊಡಲಿಲ್ಲ ಕೊಡಲಿಲ್ಲ
ಕೈಪಿಡಿ ನೀವು ಕೊಡಲಿಲ್ಲ
ಬೇಡವೆ ಬೇಡ ಬೇಡವೆ ಬೇಡ
ಕ್ಲಸ್ಟರ್ ನಮಗೆ ಬೇಡವೆ ಬೇಡ
ಒಂದು ಕಣ್ಣಿಗೆ ಬೆಣ್ಣೆಯ ಹಚ್ಚಿ
ಇನ್ನೊಂದು ಕಣ್ಣಿಗೆ ಸುಣ್ಣವ ಹಚ್ಚಿ
ಮೀಸೆಯ ಅಡಿಯಲಿ ನಗುತಿಹ ನೋಡಿ 
ಮೋಸವ ಮಾಡಲು ಬಿಡಬೇಡಿ
 ಬಂದವರಲ್ಲ ತಂದವರಲ್ಲ
ಕನ್ನಡ ಮಣ್ಣಲಿ ಇದ್ದವರು
ಹೊಸಹೊಸ ರೀತಿಯ ಶಿಕ್ಷಣ ನೀತಿ
ಕನ್ನಡಕಿಂದು ಪುಸ್ತಕ ಭೀತಿ
ಎಲ್ಲಿದೆ ನ್ಯಾಯ ಎಲ್ಲಿದೆ ನೀತಿ
ಹೇಳಿರಿ ಹೇಳಿರಿ ಸರಕಾರ
ಬ್ಲೆಂಡೂ ಬರಲಿ ಸಾಕ್ಷರ ಬರಲಿ
ಆದರೆ ಕೈಪಿಡಿ ಮೊದಲೇ ಬರಲಿ   
ಜಯಕಾರ ಜಯಕಾರ 
ಕನ್ನಡ ಸಂಘಕೆ ಜಯಕಾರ
ಧಿಕ್ಕಾರ ಧಿಕ್ಕಾರ 
ಮಲತಾಯಿ ಧೋರಣೆಗೆ ಧಿಕ್ಕಾರ
                                     
ಇನ್ನೂ ಬಾರದ ಶಿಕ್ಷಕ ಕೈಪಿಡಿ, ಅಧ್ಯಾಪಕರಿಂದ ಕ್ಲಸ್ಟರ್ ಬಹಿಷ್ಕಾರ
ಬದಿಯಡ್ಕ, ಶಾಲೆ ಆರಂಭಗೊಂಡು ಮೂರೂವರೆ ತಿಂಗಳು ಕಳೆದರೂ ಶಿಕ್ಷಕರ ಕೈಪಿಡಿ ಕನ್ನಡ ಮಾಧ್ಯಮದ ಶಿಕ್ಷಕರಿಗೆ ಲಭಿಸದೇ ಇರುವ ಸ್ಥಿತಿಗೆದುರಾಗಿ ಜಿಲ್ಲೆಯಾದ್ಯಂತ ಕನ್ನಡ ಶಿಕ್ಷಕರು ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಕ್ಲಸ್ಟರ್ ತರಬೇತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಅದರ ಭಾಗವಾಗಿ ಜಿ.ಬಿ.ಯು.ಪಿ.ಎಸ್.ಪೆರಡಾಲದಲ್ಲಿ ನಡೆಯಬೇಕಾಗಿದ್ದ ತರಬೇತಿಯ ಬಹಿಷ್ಕಾರದ ವೇಳೆಯಲ್ಲಿ ಬ್ಲೆಂಡ್ ತರಬೇತಿ, ಸಾಕ್ಷರ ಕಾರ್ಯಕ್ರಮ ಮೊದಲಾದ ನೂತನ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಕನ್ನಡ ಶಿಕ್ಷಕರಗೆ ಅಗತ್ಯವಾದ ಸಾಮಾಗ್ರಿಗಳನ್ನು ಸಕಾಲದಲ್ಲಿ ಒದಗಿಸದೇ ಸತಾಯಿಸುವ ಸರಕಾದ ಕ್ರಮವನ್ನು ಖಂಡಿಸಲಾಯಿತು. ಇನ್ನು ಮುಂದೆಯೂ ಅಧಿಕಾರಿಗಳು ಮಲತಾಯಿ ಧೋರಣೆಯನ್ನು ಮುಂದುವರಿಸಿದ್ದೇ ಆದಲ್ಲಿ ಶಿಕ್ಷಣ ಇಲಾಖೆ ನಿರ್ದೇಶಿಸುವ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೂ ಅಸಹಕಾರ ತೋರಬೇಕಾದೀತು ಎಂದು ಸಂಘಟನೆ ಈ ಮೂಲಕ ಎಚ್ಚರಿಕೆ ನೀಡಿದೆ.ಕ್ಲಸ್ಟರ್ ಬಹಿಷ್ಕಾರದ ನೇತೃತ್ವವನ್ನು ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎಂ.ವಿ. ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ, ಜೊತೆ ಕಾರ್ಯದರ್ಶಿ ಪ್ರಭಾವತಿ ಕೆ ಪುಂಡೂರು,ಉಪಜಿಲ್ಲಾ ಅಧ್ಯಕ್ಷ ರಾಜಾರಾಮ ಕೆ.ವಿ,ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್, ಖಜಾಂಜಿ ಪ್ರದೀಪ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಕ್ಲಸ್ಟರ್ ತರಬೇತಿಯಲ್ಲಿ ಭಾಗವಹಿಸಬೇಕಾಗಿದ್ದ ಸುಮಾರು ನಾನ್ನೂರಕ್ಕೂ ಮಿಕ್ಕಿ ಕನ್ನಡ ಶಿಕ್ಷಕರು ಮೆರವಣಿಗೆಯಲ್ಲಿ ತೆರಳಿ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.





                                                         

Tuesday, 16 September 2014


-->
16-09-2014
ಇನ್ನೂ ಬಾರದ ಕನ್ನಡ ಮಾಧ್ಯಮ ಅಧ್ಯಾಪಕ ಪಠ್ಯ -ಸರಕಾರದ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ,
ಕ್ಲಸ್ಟರ್ ಬಹಿಷ್ಕರಿಸಿ, ಕನ್ನಡ ಅಧ್ಯಾಪಕ ಸಂಘ.

ಕಾಸರಗೋಡು,ಶಾಲೆ ಆರಂಭವಾಗಿ ಮೂರೂವರೆ ತಿಂಗಳು ಕಳೆದರೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ ಒದಗಿಸಬೇಕಾದ ಪಠ್ಯಪುಸ್ತಕ ಮತ್ತು ಅಧ್ಯಾಪಕ ಪಠ್ಯದ ಪೂರೈಕೆಯಲ್ಲಿ ವಿಳಂಬನೀತಿ ತೋರಿಸುವ ಸರಕಾರದ ಮಲತಾಯಿ ಧೋರಣೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ತೀವ್ರವಾಗಿ ವಿರೋಧಿಸಿದೆ.ಒಂದು ಕಡೆಯಲ್ಲಿ ಸಂಪೂರ್ಣ ಸಾಕ್ಷರತೆ, ಸಂಪೂರ್ಣ ಕಂಪ್ಯೂಟರ್ ಜ್ಞಾನ ಮೊದಲಾದ ನೂತನ ಯೋಜನೆಗಳನ್ನು ಪುಂಖಾನುಪುಂಖವಾಗಿ ಸ್ವಯಂ ಘೋಷಿಸಿಕೊಂಡು ಗಾಳಿಯಲ್ಲಿ ಗುದ್ದಾಡುವಂತೆ ಶಿಕ್ಷಕರನ್ನು ಸತಾಯಿಸುವ ಸರಕಾರದ ಕ್ರಮ ಖಂಡನೀಯವಾಗಿದೆ. ಹೊಸಪಠ್ಯಕ್ರಮದ ಅಂಗವಾಗಿ ಬದಲಾದ ಪಾಠ ಪುಸ್ತಕದ ಕುರಿತು ಸಮಗ್ರ ಚಿತ್ರಣ ನೀಡುವ ಅಧ್ಯಾಪಕ ಪಠ್ಯದ ವಿತರಣೆಯಲ್ಲಿ ಬಂದ ನ್ಯೂನತೆ ಕನ್ನಡ ಶಿಕ್ಷಣ ಕ್ಷೇತ್ರಕ್ಕೇ ಸರಕಾರ ಮಾಡುತ್ತಿರುವ ಘೋರ ಅಪಚಾರವಾಗಿದೆ. ಬಹಳ ನಾಜೂಕಾಗಿ ನೂತನ ಪಠ್ಯಕ್ರಮದಂತೆ ಅಧ್ಯಾಪನದಲ್ಲಿ ತೊಡಗಿದ ಕನ್ನಡ ಶಿಕ್ಷಕರ ತಾಳ್ಮೆಯನ್ನು ದೌರ್ಬಲ್ಯವೆಂದು ಪರಿಗಣಿಸುವ ಅಧಿಕೃತ ಧೋರಣೆಗೆದುರಾಗಿ ತನ್ನ ಅಸಹಕಾರ ಚಳವಳಿಯಂತಹ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ನಡೆಸಲು ಹಿಂಜರಿಯಲಾರದು ಎ೦ದು ಸಂಘಟನೆ ಅಭಿಪ್ರಾಯಪಟ್ಟಿದೆ.ಇದರ ಸೂಚನೆಯೆಂಬಂತೆ ಮುಂದೆ ನಡೆಯುವ ಕನ್ನಡ ಅಧ್ಯಾಪಕ ಪಠ್ಯ ರಹಿತ ಯಾವುದೇ ಕ್ಲಸ್ಟರ್ ತರಬೇತಿಗಳನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದೆ.
10-09-2014.
ಕುಂಬಳೆ ಉಪಜಿಲ್ಲೆಯ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿದ ಶ್ರೀ ಕೈಲಾಸ ಮೂರ್ತಿಯವರಿಗೆ ಅಭಿನಂದನೆಗಳು.

Tuesday, 9 September 2014

08-09-2014
ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ನಡೆಯುವ ಮಕ್ಕಳ ಧ್ವನಿ ಕಾರ್ಯಕ್ರಮದ ಧ್ವಜ ಹಸ್ತಾಂತರ,22ನೇಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ ಕಾಸರಗೋಡು ವೇದಿಕೆ.
ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಮಕ್ಕಳ ಧ್ವನಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಂದಿನ ಮಕ್ಕಳ ಧ್ವನಿ ಕಾರ್ಯಕ್ರಮ ನಡೆಸುವುದಕ್ಕಾಗಿ ಕಾಸರಗೋಡು ಜಿಲ್ಲೆಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಕೇಂದ್ರ ಅಧ್ಯಕ್ಷರಾದ ಜಯರಾಮ ಪೂಂಜಾ ರವವರು ನಿಯೋಜಿತ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಕೆ ಇವರಿಗೆ ಧ್ವಜ ಹಸ್ತಾಂತರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಂಗಮದ ಕೇಂದ್ರ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ರಾವ್, ಕೇಂದ್ರ ಸಮಿತಿ ಸದಸ್ಯರೂ ಪೂರ್ವಾಧ್ಯಕ್ಷರೂ ಆದ ವಿ.ಬಿ.ಕುಳಮರ್ವ ಮತ್ತು ಕಾಸರಗೋಡು ಘಟಕದ ಅಧ್ಯಕ್ಷರಾದ ವಾಣಿ ಪಿ.ಎಸ್ ಉಪಸ್ಥಿತರಿದ್ದರು.



Wednesday, 3 September 2014

ಓಣಂ ಪರೀಕ್ಷೆಯು ನಿಗದಿಯಾದಂತೆ ಅನಿವಾರ್ಯ  ಕಾರಣಗಳಿಂದ ನಡೆಯಲಿಲ್ಲ.ಅಗೋಸ್ತು 26 ,ಸೆಪ್ಟಂಬರ್ 2 ರಂದು ನಡೆಯಬೇಕಾಗಿದ್ದ ಪರೀಕ್ಷೆಗಳು ಅನುಕ್ರಮವಾಗಿ ಸೆಪ್ಟಂಬರ್ 17 ಮತ್ತು 18 ರಂದು ನಡೆಯಲಿದೆ.ಕಾಸರಗೋಡು ಜಿಲ್ಲೆಯಲ್ಲಿ  ಅಗೋಸ್ತು 29 ರಂದು ನಡೆಯಬೇಕಾದ ಪರೀಕ್ಷೆಯು ಸೆಪ್ಟಂಬರ್ 19 ರಂದು ನಡೆಯಲಿದೆ.ಸಮಯ ಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ. No.QIP(1) 52870/14/DPI Dated 03-09-2014.

ಓಣಂ ಹಬ್ಬದ ಶುಭಾಶಯಗಳು


ಶಿಕ್ಷಕ ದಿನದ ಶುಭಾಶಯಗಳು

ಅಜ್ಞಾನ ತಿಮಿರಾಂಧಸ್ಯ
ಜ್ಞಾನಾಂಜನ ಶಲಾಕಯಾ I
ಚಕ್ಷುರುನ್ಮೀಲಿತಂ ಏನ
ತಸ್ಮೈ ಶ್ರೀ ಗುರವೇ ನಮಃ II