FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

ಸಾಧನೆಗಳು

27-11-2022
         
ಕಾಸರಗೋಡು ಜಿಲ್ಲೆಯಲ್ಲಿ ಈ ಹಿಂದೆ ಶಾಲಾ ಕಲೋತ್ಸವದಲ್ಲಿ ಕನ್ನಡ ಸ್ಪರ್ಧೆಗಳನ್ನು ಮಾಡಿ ಕನ್ನಡ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸಲಾಗಿತ್ತು. ಆದರೆ ಅದನ್ನು ಈ ವರ್ಷ ತಡೆ ಹಿಡಿದಾಗ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಲ್ಲಿ ಮನವಿ ಮಾಡಿದರೂ ಸರಿಯಾದ ಸ್ಪಂದನೆ ಲಭಿಸದ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಆ ಮೂಲಕ ಈ ವರ್ಷವೂ ಕನ್ನಡ ಸ್ಪರ್ಧೆಗಳನ್ನು ನಡೆಸಬೇಕೆಂಬ ಆದೇಶ ದೊರಕಿತ್ತು. ಆದಾಗ್ಯೂ ಕಾಸರಗೋಡು ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕನ್ನಡ ಸ್ಪರ್ಧೆಗಳನ್ನು ಮತ್ತೆ ತಡೆ ಹಿಡಿದ ವಿಚಾರವಾಗಿ ತಾ. 27-11-2022 ರಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ನಡೆಸಿದ ಪ್ರಯತ್ನದ ಫಲವಾಗಿ ಈ ವರ್ಷವೂ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಕನ್ನಡ ಸ್ಪರ್ಧೆಗಳು ನಡೆಸಲು ಅನುಮತಿ ಸಿಕ್ಕಿದೆ. ಇದಕ್ಕಾಗಿ ಸಹಕರಿಸಿದ ಮಂಜೇಶ್ವರ ಮತ್ತು ಕಾಸರಗೋಡು ಶಾಸಕರು ಹಾಗೂ ವಿವಿಧ ಸಂಘಟನೆಗಳ ನೇತಾರರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.

05-11-2022
      
       ಕೇರಳ ಶಾಲಾ ಕಲೋತ್ಸವವು ಶಾಲಾ ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲು ಇರುವ ಅತೀ ದೊಡ್ಡ ವೇದಿಕೆಯಾಗಿದೆ. ಇದು ದೇಶದಾದ್ಯಂತ ಅತೀ ಹೆಚ್ಚು ಜನ ಮನ್ನಣೆ ಪಡೆದ ಶಾಲಾ ಕಲೋತ್ಸವವೂ ಹೌದು. ಇಂತಹ ವೇದಿಕೆಯಲ್ಲಿ ಕನ್ನಡದ ಮಕ್ಕಳಿಗೆ ಸರಿಯಾದ ಅವಕಾಶಗಳು ಇಲ್ಲದೇ ಹೋದುದು ಇಲ್ಲಿನ ಕನ್ನಡಿಗರಿಗೆ ಅಸಮಾಧಾನವನ್ನು ತಂದಿತ್ತು.
       ಈ ಹಿಂದೆ ನಡೆದಿರುವ ಶಾಲಾ ಕಲೋತ್ಸವಗಳಲ್ಲಿ ಕನ್ನಡದ ಕೆಲವು ಸ್ಪರ್ಧೆಗಳನ್ನು ಮಾಡುವ ಮೂಲಕ ಕನ್ನಡದ ಮಕ್ಕಳಿಗೆ ಉಪಜಿಲ್ಲೆ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ವರ್ಷ ಇದಕ್ಕೆ ಅವಕಾಶವನ್ನು ಕಲ್ಪಿಸದೆ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳ ಆಕ್ರೋಶಕ್ಕೆ ಕಾರಣವಾಗಿತ್ತು.
      ಉಪಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ನಿರ್ಧಾರದಿಂದ ಕನ್ನಡ ಸ್ಪರ್ಧೆಗಳನ್ನು ಮಾಡಲು ಅವಕಾಶ ದೊರೆತರೂ ಜಿಲ್ಲಾ ಮಟ್ಟದಲ್ಲಿ ನಡೆಯುವುದು ಅನುಮಾನವೆನಿಸಿತು. ಈ ಸಂಬಂಧ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಈ ಮೊದಲಿನಂತೆ ಕನ್ನಡ ಸ್ಪರ್ಧೆಗಳು ನಡೆಯುವಂತೆ ಮಾಡಲು ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿತ್ತು. ಇದಕ್ಕೆ ಸರಿಯಾದ ಸ್ಪಂದನೆ ಸಿಗದಿರುವುದರಿಂದ ಬಳಿಕ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರನ್ನು ನೀಡಲಾಯಿತು. ಇದರ ಸಂಬಂಧ ಮಕ್ಕಳ ಹಕ್ಕುಗಳ ಆಯೋಗವು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಇಟ್ಟುಕೊಂಡು ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತಾರರೊಂದಿಗೆ ಎರಡು ಬಾರಿ ಪರಿಶೀಲನಾ ಸಭೆ ನಡೆಸಿದೆ. ಆ ಬಳಿಕ ಈ ಹಿಂದೆ ನಡೆದಂತೆ ಈ ವರ್ಷವೂ ಕನ್ನಡದ ಸ್ಪರ್ಧೆಗಳು ನಡೆಯುವಂತೆ ಮಕ್ಕಳ ಹಕ್ಕುಗಳ ಆಯೋಗದ ಆದೇಶ ಸಂಖ್ಯೆ 10772/14/LA2/2022/KeSCPCR, ದಿನಾಂಕ 03-11-2022 ರಂತೆ ಆದೇಶ ಹೊರಡಿಸಿ, ರಾಜ್ಯ ಶಿಕ್ಷಣ ಮಹಾ ನಿರ್ದೇಶಕರಿಗೆ ಹಾಗೂ ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಿಗೆ ಕಳುಹಿಸಲಾಗಿತ್ತು. ಹಾಗಾಗಿ ಈ ಹಿಂದೆ ನಡೆದಿರುವಂತೆ ಈ ವರ್ಷವೂ ಕನ್ನಡದ ಸ್ಪರ್ಧೆಗಳು ನಡೆಯಬೇಕೆಂಬ ಆದೇಶ  ಬಂದಿರುತ್ತದೆ. 

28-08-2022
         ಕಾಸರಗೋಡಿನ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡೇತರ ಅಧಿಕಾರಿಯ ನೇಮಕಾತಿಯಾಗಿ ಹಲವು ದಿನಗಳ ಬಳಿಕ ಇದೀಗ ಸಮಸ್ಯೆ ಇತ್ಯರ್ಥವಾಗಿದ್ದು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿ ಕನ್ನಡಿಗ ಶ್ರೀ ನಂದಿಕೇಶನ್ ಎನ್ ನೇಮಕವಾಗಿ ಆದೇಶ ಹೊರಡಿಸಲಾಗಿದೆ.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ, ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಕೆಯೊಂದಿಗೆ ನಿರಂತರ ಸಂಪರ್ಕ ಮಾಡಿದುದರ ಫಲವಾಗಿ ಕನ್ನಡಿಗರಿಗೆ ಮೀಸಲಾದ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಗಳ ಹುದ್ದೆಗೆ ಮತ್ತೆ ಕನ್ನಡಿಗ ಅಧಿಕಾರಿಯನ್ನು ನೇಮಿಸಲಾಗಿದೆ. ಇದು ಕನ್ನಡ ಅಧ್ಯಾಪಕರ ಸಂಘಟನೆಯ ಹೋರಾಟದ ಫಲ, ಕನ್ನಡಿಗರಿಗೆ ಸಿಕ್ಕ ಜಯ ಎಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿ ಬಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
       ಕಾಞಂಗಾಡ್ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡಿಗ ಶ್ರೀ ನಂದಿಕೇಶನ್ ಎನ್ ವರ್ಗಾವಣೆಯ ಆದೇಶ ಬಂದಿದೆ. 

19-02-2022
        ವಾಯನ ವಸಂತ ಕಾರ್ಯಕ್ರಮದಂಗವಾಗಿ ಲೈಬ್ರೆರಿ ಕೌನ್ಸಿಲ್ ವತಿಯಿಂದ ಯು. ಪಿ ಶಾಲೆಗಳಿಗೆ ನೀಡುವ ಪುಸ್ತಕಗಳು ಕೇವಲ ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯದ್ದಾಗಿರುತ್ತವೆ ಎಂದು ತಿಳಿದು ನಮ್ಮ ಕನ್ನಡ ಅಧ್ಯಾಪಕರ ಸಂಘಟನೆ ಕೂಡಲೇ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತವಾಗಿದೆ. ಮಲಯಾಳಂ ಪುಸ್ತಕಗಳು ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಉಪಯೋಗ ಇಲ್ಲದಿರುವುದರಿಂದ ಅದನ್ನು ಸರಿಪಡಿಸಲು, ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳನ್ನು ಸಿಗುವಂತೆ ಮಾಡಲು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಆ ಕೂಡಲೇ ಕಾರ್ಯಪ್ರವೃತ್ತರಾಗಿ, ಸೂಚನೆ ಬಂದ ಕೂಡಲೇ ಮೇಲಾಧಿಕಾರಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಗಳನ್ನು ಸಂಪರ್ಕಿಸಿ, ಸರಿಪಡಿಸಲು ಪ್ರಯತ್ನಿಸಿ ಯಶಸ್ಸನ್ನು ಕಂಡಿದೆ. ಈ ಬಗ್ಗೆ ಮೇಲಾಧಿಕಾರಿಗಳು ತಾ 19-02-2022 ನೇ ಶನಿವಾರದಂದು ನಮ್ಮ ಸಂಘಟನೆಯ ಅಧ್ಯಕ್ಷರಿಗೆ ಕರೆ ಮಾಡಿ, ಕನ್ನಡ ಮಾಧ್ಯಮದ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಪುಸ್ತಕಗಳನ್ನು ಕೊಳ್ಳುವ ಆದೇಶ ದೊರೆತಿರುವುದನ್ನು ತಿಳಿಸಿರುತ್ತಾರೆ. ಅದರಂತೆ ಕನ್ನಡದ 75% ಪುಸ್ತಕಗಳು ಉಳಿದ 25% ಇಂಗ್ಲಿಷ್ ಪುಸ್ತಕಗಳನ್ನು ಕೊಳ್ಳಬಹುದು. ಇದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಹೋರಾಟದ ಫಲ. ಈ ಸಂದರ್ಭದಲ್ಲಿ ಸಮಸ್ಯೆಯನ್ನು ಸರಿಪಡಿಸಲು ಸಹಕರಿಸಿದ ಕೇರಳ ಸರಕಾರ, ಸಂಬಂಧ ಪಟ್ಟ ಇಲಾಖೆ ಮತ್ತು ಮೇಲಧಿಕಾರಿಕಾರಿಗಳಿಗೆ ಸಂಘಟನೆಯ ಪರವಾಗಿ ಧನ್ಯವಾದವನ್ನು ಅರ್ಪಿಸುತ್ತೇವೆ.


23-12-2021
         ಇಂದು (23-12-2021) ವಿಕ್ಕಿ ಪ್ಯಾಡ್ ಗೂಗಲ್ ಫಾರ್ಮ್ ನ್ನು ಪೂರ್ತಿ ಮಾಡಲು ಬಂದ ಮೇಲ್ ಸಂಪೂರ್ಣ ಮಲಯಾಳಂ ಭಾಷೆಯಲ್ಲಿ ಇದ್ದು (10 ಪುಟ) ಇದನ್ನು ಪೂರ್ತಿಗೊಳಿಸುವರೇ ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರುಗಳು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ರಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸಿದಾಗ ಕೇಂದ್ರ ಸಮಿತಿಯ ಅಧ್ಯಕ್ಷರು ಕಾಸರಗೋಡು ಜಿಲ್ಲೆಯ ಐಟಿ ಕೋರ್ಡಿನೇಟರ್ ನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಈ ಬಗ್ಗೆ ಅವರಿಗೆ ವಿಷಯವನ್ನು ಮನದಟ್ಟು ಮಾಡಿರುತ್ತಾರೆ. ಇದಕ್ಕೆ ಸ್ಪಂದಿಸಿದ ಅವರು ರಾಜ್ಯ ಐಟಿ ಕೋರ್ಡಿನೇಟರ್ ನ್ನು ಸಂಪರ್ಕಿಸಿ ಒಂದೇ ಗಂಟೆಯ ಒಳಗೆ ಮಲಯಾಳಂಗೆ ಸಮಾನಾಂತರವಾಗಿ ಇಂಗ್ಲಿಷ್ ನಲ್ಲಿ ಗೂಗಲ್ ಫಾರ್ಮ್ ನ್ನು ಕಳುಹಿಸಿ ಕೊಟ್ಟಿರುತ್ತಾರೆ. 
        ಇದಕ್ಕಾಗಿ ಗೌರವಾನ್ವಿತ ಜಿಲ್ಲಾ ಐಟಿ ಕೋರ್ಡಿನೇಟರ್ ಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಾಗೆಯೇ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರ ಮನವಿಗೆ ಸ್ಪಂದಿಸಿ ಕಾರ್ಯಪ್ರವೃತ್ತರಾದ ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಅಭಿನಂದನೆ ಸಲ್ಲಿಸಿರುತ್ತಾರೆ.

....................................................................................
 
ಕನ್ನಡ ಕಲಿಕಾ ಡಿವಿಡಿಯನ್ನು ಕಲ್ಲಿಕೋಟೆ ಜಿಲ್ಲೆಯ ವೆಳ್ಳಿಮಾಡಕುನ್ನಿನಲ್ಲಿ ರಾಜ್ಯ ಶಿಕ್ಷಣ ಸಚಿವರು ಬಿಡುಗಡೆಗೊಳಿಸಿದರು.ಕೇರಳದ ಇತರ ಭಾಷೆಗಳಿಗೆ ಮತ್ತು ವಿಷಯಗಳಿಗೆ ಇಂತಹ ಕಲಿಕಾ ಸಂಪನ್ಮೂಲವನ್ನು ತಯಾರಿಸಬಹುದೆಂದು ಅಭಿಪ್ರಾಯಪಟ್ಟರು.
 ಕನ್ನಡ ಕಲಿಕಾ ಡಿವಿಡಿ ಕನ್ನಡ ಅಧ್ಯಾಪಕರ ಸಾಮರ್ಥ್ಯದ ಕೈಗನ್ನಡಿ. 
ಕೇರಳದಲ್ಲಿ ಪಠ್ಯಪುಸ್ತಕದ ನವೀಕರಣದ ಭಾಗವಾಗಿ ತಯಾರಾದ ಅಧ್ಯಾಪಕರ ಪಠ್ಯಕ್ಕೆ ಪೂರಕವಾದ ಡಿ.ವಿ.ಡಿ. ನಿರ್ಮಾಣವನ್ನು ಮಾಡುವುದರ ಮೂಲಕ ಕಾಸರಗೋಡು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯೊಂದನ್ನು ನೀಡಿದಂತಾಗಿದೆ, ಇದು ಇತರರಿಗೂ ಮಾದರಿಯಾಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇಂತಹ ಪಠನೋಪಕರಣಗಳು ಸಹಾಯಕವಾಗುತ್ತವೆ. ಆದುದರಿಂದ ಎಲ್ಲರೂ ಮಾಹಿತಿತಂತ್ರಜ್ಞಾನದ ಕೊಡುಗೆಯನ್ನು ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ ಮಾಡುವಲ್ಲಿ ಸಫಲರಾಗಬೇಕೆಂದು ಮಂಜೇಶ್ವರ ಶಾಸಕರಾದ ಪಿ.ಬಿ. ಅಬ್ದುಲ್ ರಝಾಕ್ ನುಡಿದರು. ಅವರು ಕುಂಬಳೆ ಜಿ.ಎಸ್.ಬಿ.ಎಸ್.ನ ಲ್ಲಿ ಕನ್ನಡ ಕಲಿಕೆಯ ಡಿ.ವಿ.ಡಿ.ಯ ವಿತರಣೆ ಮತ್ತು ಅಧ್ಯಾಪಕರಿಗಾಗಿ ಏರ್ಪಢಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನ್ಯಾಯವಾದಿ ಶ್ಯಾಮಲಾ ದೇವಿಯವರು ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಂಲಾ ಕಲಿಕಾ ಡಿವಿಡಿಯನ್ನು ಉದ್ಘಾಟಕರಿಂದ ಸ್ವೀಕರಿಸಿದರು. ಸಿ.ರಾಘವನ್ ಡಿ.ಡಿ..ಕಾಸರಗೋಡು,ತಮ್ಮ ಭಾಷಣದಲ್ಲಿ ಕಾಸರಗೋಡು ಶಿಕ್ಷಣ ಕ್ಷೇತ್ರದಲ್ಲಿ ಕೇರಳದ ಇತರ ಜಿಲ್ಲೆಯವರಿಗಿಂತ ಕಡಿಮೆಯೇನಲ್ಲ ಎ೦ಬುದನ್ನು ಈ ಡಿ.ವಿ.ಡಿ.ನಿರ್ಮಾಣದಿಂದ ಸಾಬೀತಾಗಿದೆಂದರು. ಡಾ.ಪಿ.ವಿ.ಕೃಷ್ಣಕುಮಾರ್ ಡಯಟ್ ಪ್ರಾಂಶುಪಾಲರು, ಡಾ.ಎ೦ ಬಾಲನ್ ಜಿಲ್ಲಾ ಪ್ರೋಗ್ರಾಂ ಅಧಿಕಾರಿ ಎಸ್.ಎಸ್..ಕಾಸರಗೋಡು, ಶ್ರೀ ಸದಾಶಿವ ನಾಯಕ್ ಉಪಜಿಲ್ಲಾ ಶಿಕ್ಷಣಾಧಿಕಾರಿ ಕುಂಬಳೆ, ಎನ್ ನಂದಿಕೇಶನ್ ಶಿಕ್ಷಣಾಧಿಕಾರಿ ಮಂಜೇಶ್ವರ, ರಾಜೇಶ್ ಐ.ಟಿ. ಕೋರ್ಡಿನೇಟರ್ ಕಾಸರಗೋಡು, ಪದ್ಮನಾಭ ಬ್ಲಾತೂರು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಮತ್ತು ಜೋನಿ ಕೆ.ಜೆ. ಪ್ರಭಾರ ಮುಖ್ಯ ಶಿಕ್ಷಕರು ಶುಭಾಶಂಸನೆಗೈದರು.
ಡಾ.ಸಿ.ಭಾಮಿನಿ ಪ್ರಾಸ್ತಾವಿಕ ನುಡಿದರು. ಕಾಸರಗೋಡು ಜಿಲ್ಲೆಗೆ ಆಗಮಿಸಿ ಎಸ್.ಸಿ.ಆರ್.ಟಿ. ತಯಾರಿಸಿದ ಕನ್ನಡ ಭಾಷಾ ಡಿ.ವಿ.ಡಿ.ಯನ್ನು ವಿತರಿಸಲು ನಡೆದ ಸಮಾರಂಭದಲ್ಲಿ ಭಾಗವಹಿಸಿ ಸ್ವತ: ಸ್ವಾಗತ ಭಾಷಣ ಮಾಡಿದ ನಿರ್ದೇಶಕ ಪ್ರೊ.ಕೆ..ಹಾಶಿಂ ರವರನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಟಿ.ಡಿ. ಸದಾಶಿವ ರಾವ್ ಮತ್ತು ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಸ್ಮರಣಿಕೆ ಪ್ರದಾನ ಮಾಡಿದರು.ಸುಬ್ರಹ್ಣಣ್ಯ ಭಟ್ ಸ್ವಾಗತಿಸಿ,ಡಯಟ್ ಪ್ರಾಧ್ಯಾಪಕರಾದ ನಾರಾಯಣ ದೇಲಂಪಾಡಿ ನಿರೂಪಿಸಿದರು. ಜ್ಯೋತಿ.ಪಿ.ವಿ ಮತ್ತು ವಾಣಿ ಪಿ.ಎಸ್. ಪ್ರಾರ್ಥನೆ ಹಾಡಿದರು.
ಉದ್ಘಾಟನೆಯ ಬಳಿಕ ೧,,೫ ಮತ್ತು ೭ ತರಗತಿಗಳ ಡಿವಿಡಿಗಳ ಪರಿಚಯ ತರಬೇತಿ ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ನಡೆಯಿತು. ಎಲ್ಲಾ ಶಾಲೆಗಳಿಗೂ ಡಿ.ವಿ.ಡಿ.ವಿತರಿಸಲಾಯಿತು
-->
ಕನ್ನಡ ಅಧ್ಯಾಪಕ ಧ್ವನಿ ಬಿಡುಗಡೆ.
ಭಾಷಾ ಅಲ್ಪ ಸಂಖ್ಯಾತರಾದ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ರಾಜ್ಯ ಸರಕಾರ ಮುತುವರ್ಜಿ ವಹಿಸಲು ವಿಫಲವಾಗುತ್ತಿರುವುದು ಎಲ್ಲಾಕನ್ನಡಿಗರಿಗೆ ಸರಕಾರವು ಮಾಡುವ ವಂಚನೆಯಾಗಿದೆ, ಜಿಲ್ಲಾಧಿಕಾರಿ ಕಛೇರಿ ಸಹಿತ ಅನೇಕ ಕಛೇರಿಗಳಲ್ಲಿ ಸಾಕಷ್ಟು ಕನ್ನಡ ಉದ್ಯೋಗಸ್ಥರನ್ನು ನೇಮಕ ಮಾಡದೆ, ಸಂಬಂಧ ಪಟ್ಟ ಕಡತ ಅರ್ಜಿ ವಗೈರೆಗಳನ್ನು ಕನ್ನಡದಲ್ಲಿ ಸ್ವೀಕರಿಸಲು ಮುಂದಾಗದ ಉದ್ಯೋಗಸ್ಥರನ್ನು ಕೂಡಲೇ ತೆರವುಗೊಳಿಸಿ ,ಎಲ್ಲಾ ಕಛೇರಿಗಳಲ್ಲಿ ಸಾಕಷ್ಟು ಕನ್ನಡ ಉದ್ಯೋಗಸ್ಥರನ್ನು ನೇಮಕಮಾಡಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಸಂರಕ್ಷಿಸಬೇಕು. ಜನಸಾಮಾನ್ಯರು ಯಾವ ಭಾಷೆಯಲ್ಲೂ ಅರ್ಜಿ ಕೊಟ್ಟು ತಮಗೆ ತಿಳಿದ ಅದೇ ಭಾಷೆಯಲ್ಲಿ ಉತ್ತರ ಪಡೆಯಲು ಹಕ್ಕನ್ನು ಹೊಂದಿದ್ದಾರೆ, ಈ ಕುರಿತು ಸಾಕಷ್ಟು ತಿಳುವಳಿಕೆಯಿಲ್ಲದ ಅಧಿಕಾರಿಗಳು ಕನ್ನಡಿಗರನ್ನು ಗೋಳುಹೊಯ್ಸುವುದು ಖಂಡನೀಯ,ಇದರ ವಿರುದ್ಧ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಮಾಸ್ತರ್ ನುಡಿದರು. ಅವರು ಕನ್ನಡಅಧ್ಯಾಪಕ ಭವನದಲ್ಲಿ ಜರಗಿದ ಕನ್ನಡ ಮಾಧ್ಯಮ ಅಧ್ಯಾಪಕ ಧ್ವನಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಕೆ.ಸತ್ಯನಾರಾಯಣ , ಸಂಘಟನೆಯ ಉಪಾಧ್ಯಕ್ಷರಾದ ಕೆ.ವಿ.ಸತ್ಯನಾರಾಯಣ ರಾವ್, ಮಂಜೇಶ್ವರ ಘಟಕದ ಅಧ್ಯಕ್ಷ ಶ್ರೀನಿವಾಸ ರಾವ್, ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ರಾಜಾರಾಮ ಕೆ.ವಿ, ಕಾಸರಗೋಡು ಘಟಕಾಧ್ಯಕ್ಷ ರಾಜೇಶ್ವರ ಸಿ.ಎಚ್ ಮತ್ತು ಬೇಕಲ ಹೊಸದುರ್ಗ ಘಟಕದ ಅಧ್ಯಕ್ಷೆ ವಾರಿಜ ಎಮ್ ಉಪಸ್ಥಿತರಿದ್ದರು. ಪ್ರೊ.ವಾಸುದೇವ ಚಾಪಾಡಿ ಮತ್ತು ದಿ.ಹರ್ಷವರ್ಧನ ಭಟ್ ಪ್ರಾಯೋಜಿತ ಕನ್ನಡ ವಿದ್ಯಾರ್ಥಿ ಪ್ರಶಸ್ತಿಯನ್ನು ಅನುಕ್ರಮವಾಗಿ ನಿಖಿಲ್ ಬಿ,ಹರ್ಷಿತಾ ಕೆ.ಜಿ ಮತ್ತು ವೀಕ್ಷಿತಾ ಜೆ. ಆರ್, ಸ್ವೀಕರಿಸಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಸ್ವಾಗತಿಸಿ ಖಜಾಂಜಿ ಪದ್ಮಾವತಿ ಎಮ್ ವಂದಿಸಿದರು. ಸಂಘಟನೆಯ ಅಧಿಕೃತ ವಕ್ತಾರ ವಿಶಾಲಾಕ್ಷಪುತ್ರಕಳ ನಿರೂಪಣೆಗೈದರು.

ಪ್ರೊ.ವಾಸುದೇವ ಚಾಪಾಡಿ ಮತ್ತು ದಿ.ಹರ್ಷವರ್ಧನ ಭಟ್ ಪ್ರಾಯೋಜಿತ ಕನ್ನಡ ವಿದ್ಯಾರ್ಥಿ ಪ್ರಶಸ್ತಿಯನ್ನು ಅನುಕ್ರಮವಾಗಿ ನಿಖಿಲ್ ಬಿ,ಹರ್ಷಿತಾ ಕೆ.ಜಿ ಮತ್ತು ವೀಕ್ಷಿತಾ ಜೆ. ಆರ್, ಸ್ವೀಕರಿಸಿದರು.

 


ಕನ್ನಡ ಅಧ್ಯಾಪಕರು ಕೇರಳ ಕರ್ನಾಟಕ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಗಳಾಗಲಿ

ಬಂದಡ್ಕ, ಆಗಸ್ಟ್ 9. ಗಡಿನಾಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಕನ್ನಡ ಮಾಧ್ಯಮದಲ್ಲಿ ಕಲಿತರೆ ಕೇರಳ ಕರ್ನಾಟಕ ರಾಜ್ಯಗಳೆರಡರಲ್ಲೂ ಸಲೀಸಾಗಿ ವ್ಯವಹಾರ ಮಾಡಲು ಸಾಧ್ಯವಾಗುವುದು. ಪ್ರಾದೇಶಿಕವಾಗಿ ಕೇರಳದಲ್ಲಿ ವಾಸಿಸುವ ನಮಗೆ ಕರ್ನಾಟಕದಲ್ಲಿಯೂ ಶಿಕ್ಷಣ ಮುಂದುವರಿಸುವ ಮತ್ತು ಉದ್ಯೋಗ ಮಾಡುವ ಅವಕಾಶವಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಲು ಅಗತ್ಯವಾದ ಪರಿಕರಗಳ ಕೊರತೆಯನ್ನು ನೀಗಿಸುವ ಕಾರ್ಯಕ್ಕಾಗಿ ಹುಟ್ಟಿಕೊಂಡ ಕನ್ನಡ ಅಧ್ಯಾಪಕ ಸಂಘಟನೆ ಕೇರಳ ಕರ್ನಾಟಕ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಗಳಾಗಲಿ .ನಮ್ಮ ಮಕ್ಕಳು ಶಿಸ್ತು ಬದ್ಧ ಜೀವನವನ್ನು ರೂಪಿಸಲು ಅಗತ್ಯವಾದ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಲು ಸಾಧ್ಯವಾಗುವಂತಹ ಸ್ಥಿತಿಯನ್ನು ನಮ್ಮ ಎಲ್ಲಾ ಶಾಲೆಗಳಲ್ಲೂ ನಿರ್ಮಾಣವಾಗುವಂತೆ ಮಾಡುವಲ್ಲಿ ಕಾರ್ಯನಿರತರಾಗಬೇಕು, ಇದರಿಂದ ಕಾಸರಗೋಡಿನ ಕನ್ನಡಕ್ಕೆ ಇನ್ನಷ್ಟು ಹೊಳಪು ಬರಬಹುದು ಎ೦ದು ನಿವೃತ್ತ ಕನ್ನಡ ಶಿಕ್ಷಕರಾದ ಬಿ.ಎನ್.ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕಾಸರಗೋಡು ಉಪಜಿಲ್ಲಾ ಘಟಕದ ಮಹಾಸಭೆಯನ್ನು ಉದ್ಘಾಟಿ ಸಿ ಮಾತನಾಡುತ್ತಿದ್ದರು. ಸಂಘಟನೆಯ ಉಪಜಿಲ್ಲಾ ಮಹಾಸಭೆ ಜಿ.ಎಚ್ .ಎಸ್.ಎಸ್. ಬಂದಡ್ಕದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಪದ್ಮನಾಭ ಎಸ್.ಎಸ್., ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ, ಉಪಸ್ಥಿತರಿದ್ದರು. ದಿನೇಶ್ ಬಿ. ಸ್ವಾಗತಿಸಿ, ನಿತ್ಯಾನಂದ ಎ೦.ಕೆ. ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಾರ್ಷಿಕ ವರದಿ,ಲೆಕ್ಕಪತ್ರ ಮಂಡನೆಯ ಬಳಿಕ ಸದಸ್ಯರಿಂದ ಸಮಸ್ಯೆಗಳ ಮಂಡನೆ ಮತ್ತು ಚರ್ಚೆ ನಡೆಯಿತು. ಸಂಘಟನೆಯ ಕೇಂದ್ರ ಉಪಾಧ್ಯಕ್ಷಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಮತ್ತು ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬಳಿಕ ಉಪಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಜೇಶ್ವರ ಸಿ.ಎಚ್. ಅಧ್ಯಕ್ಷರಾಗಿ ಪ್ರೀತಂ ಎ.ಕೆ.ಕಾರ್ಯದರ್ಶಿಯಾಗಿ ಮತ್ತು ಖಜಾಂಜಿಯಾಗಿ ಬಾಬು ಆಯ್ಕೆಯಾದರು.ನೂತನ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕಾರ ನಡೆಯಿತು.


ಕಾಸರಗೋಡಿನಲ್ಲಿ ನಿರಂತರ ಕನ್ನಡ ಚಟುವಟಿಕೆಗಳು ನಡೆಯಬೇಕು -ಅಧ್ಯಾಪಕರು ಇದಕ್ಕೆ ನೇತೃತ್ವ ವಹಿಸಬೇಕು.

ಪಳ್ಳಿಕ್ಕರೆ, ಆಗಸ್ಟ್ 10 – ಕಾಸರಗೋಡಿನಲ್ಲಿ ನಿರಂತರ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿರಬೇಕು. ನಮ್ಮನ್ನು ಕನ್ನಡ ಸಂಸ್ಕೃತಿಯಿಂದ ಹಿಂಜರಿಯುವಂತೆ ಮಾಡುವ ಯಾವುದೇ ಶಕ್ತಿಗಳಿಗೆ ನಾವು ತಲೆಬಾಗಬಾರದು, ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಅದನ್ನು ಎದುರಿಸುವ ಸಾಂವಿದಾನಿಕ ಹಕ್ಕು ನಮಗಿದೆ,ಅದೇ ರೀತಿ ಕನ್ನಡವನ್ನು ಕಟ್ಟಿ ಬೆಳೆಸುವ ಕರ್ತವ್ಯವೂ ನಮಗಿದೆ ಇದರಿಂದ ವಿಮುಖವಾಗುವುದು ಸರ್ವಥಾ ಸರಿಯಲ್ಲ. ಕನ್ನಡ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅಗತ್ಯವಾದ ಸಂಪನ್ಮೂಲಗಳು ನಮ್ಮ ಮಣ್ಣಿನಲ್ಲಿಯೇ ಇದೆ ಅವುಗಳನ್ನು ಗುರುತಿಸಿ, ಕ್ರೋಡೀಕರಿಸಿ ತಮ್ಮದಾಗಿಸುವ ಚಾಣಾಕ್ಷತನವನ್ನು ನಾವು ಮೈಗೂಡಿಸಬೇಕಾಗಿದೆ, ಇದಕ್ಕಾಗಿ ಕನ್ನಡ ಅಧ್ಯಾಪಕ ಸಂಘವು ನಿರಂತರ ಪ್ರಯತ್ನಿಸಲಿ ಅದಕ್ಕೆ ನಮ್ಮ ಕೈಲಾದ ಸಹಾಯ ನಾವು ಮಾಡುವ ಪ್ರಯತ್ನ ಮಾಡುತ್ತೇವೆ - ಎ೦ದು ಹೊಸದುರ್ಗ ಕನ್ನಡ ಸಂಘದ ಅಧ್ಯಕ್ಷರಾದ ಬಿ.ವಸಂತ ಶೆಣೈ ಯವರು ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಹೊಸದುರ್ಗ- ಬೇಕಲ ಉಪಜಿಲ್ಲಾ ಘಟಕಗಳ ಮಹಾಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಸಂಘಟನೆಯ ಉಪಜಿಲ್ಲಾ ಮಹಾಸಭೆಯು ಜಿ.ಎಚ್.ಎಸ್.ಎಸ್. ಪಳ್ಳಿಕ್ಕರೆಯಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಾರಿಜ ಎ೦ ವಹಿಸಿದ್ದರು. ಲಕ್ಷ್ಮಣ ಎಚ್. ಹೊಸದುರ್ಗ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸತ್ಯನಾರಾಯಣ ರಾವ್.ಕೆ.ವಿ., ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯ ಶಿಕ್ಷಕರಾದ ಶಶಿಕಲಾ ಎ೦.,ರಾವಣೇಶ್ವರ ಶಾಲೆಯ ಮುಖ್ಯ ಶಿಕ್ಷಕರಾದ ಭಾರತಿ ಶೆಣೈ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ವರದಿ ವಾಚನ, ಲೆಕ್ಕಪತ್ರ ಮಂಡನೆ ಮತ್ತು ಅಂಗೀಕಾರ ನಡೆಯಿತು. ಸಂಘಟನೆಯ ಬಲವರ್ಧನೆ ಮತ್ತು ಸದಸ್ಯರ ಸಮಸ್ಯಗಳ ಕುರಿತು ಚರ್ಚೆ ನಡೆಯಿತು. ಹೇಮಂತ್ ಕುಮಾರ್, ನಯನಕುಮಾರಿ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪುಷ್ಪಾವತಿ ಕೆ. ಅಧ್ಯಕ್ಷರಾಗಿ, ತಿಲಕವಾಣಿ ಕಾರ್ಯದರ್ಶಿಯಾಗಿ ಮತ್ತು ರಜನಿಕುಮಾರಿ ಖಜಾಂಜಿಯಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರದೊಂದಿಗೆ ಸಭೆ ಸಂಪನ್ನಗೊಂಡಿತು.

3 comments:

  1. ಬ್ಲಾಗ್ ಉತ್ತಮವಾಗಿದೆ . ಸಂಘಟನೆಯ ಸದಸ್ಯನಾದ ನನಗೆ ಹಲವಾರು ವಿಷಯಗಳನ್ನು ಈ ಮೂಲಕ ತಿಳಿಯಲು ಸುಲಭ ಸಾಧ್ಯವಾಗಿದೆ . ಧನ್ಯವಾದಗಳು
    ಹರೀಶ . ಜಿ (ಅಧ್ಯಾಪಕ- ವಿ.ಎ.ಎಲ್.ಪಿ ಶಾಲೆ, ಉಕ್ಕಿನಡ್ಕ )

    ReplyDelete
  2. ಬ್ಲಾಗ್ ಉತ್ತಮವಾಗಿದೆ .ಹೆಡ್ಡರ್ ನಲ್ಲಿರುವ ಬ್ಲೋಗ್ ನ ಹೆಸರು ಒಂದೇ ನೋಟಕ್ಕೆ ಕಾಣುವಂತಿದ್ದರೆ ಉತ್ತಮ.
    ದಿನ ನಿತ್ಯ ಅಪ್ ಡೇಟ್ ಮಾಡುತ್ತಿದ್ದರೆ ಉತ್ತಮ.
    ಅಧ್ಯಾಪಕರಿಗೆ ಸಹಾಯಕವಾಗುವ ಕಲಿಕಾ ಸಾಮಗ್ರಿಗಳನ್ನು ಪೋಸ್ಟ್ ಮಾಡಲು ಅವಕಾಶವಿರಬೇಕು.
    ಈ ಪ್ರಪಂಚದ ಎಲ್ಲಾ ಅಧ್ಯಾಪಕರ ಸಂಪನ್ಮೂಲ ಬಿಂದುವಾಗಿ ಇದು ಬದಲಾಗಲಿ.
    ಅರವಿಂದ ಕೆ
    ಜಿ ಎಫ್ ಎಚ್ ಎಸ್ ಬೇಕಲ

    ReplyDelete
  3. ಸಂಘಟನೆಯ ಹುಟ್ಟು, ನಡೆದು ಬಂದ ರೀತಿ, ಇದಕ್ಕಾಗಿ ಅವಿಶ್ರಾಂತವಾಗಿ ದುಡಿದ ಮಹನೀಯರು, ಅಂದಿನಿಂದ ಇಂದಿನ ತನಕ ಮಾಡಿದ ಮಹತ್ಸಾಧನೆಗಳು – ಇತ್ಯಾದಿಗಳ ಕುರಿತಾದ ಕಿರು ಪರಿಚಯವಾದರೂ ಮುಖಪುಟದಲ್ಲಿ ಎದ್ದು ಕಂಡರೆ ಸಂಘಟನೆಯ ಬಗ್ಗೆ ತಿಳಿದುಕೊಳ್ಳಲು ಅನುಕೂಲವಲ್ಲವೆ? ಸಂಘಟನೆಯ ಮೂರ್ತಿಯಾಗಿ ಎದ್ದು ನಿಂತಿರುವ ಸೌಧ ಗುರುಭವನದ ಭಾವಚಿತ್ರ ಅದರೊಂದಿಗೆ ಕೈಜೋಡಿಸಿದ ಸದಸ್ಯರಿಗೆ ಆನಂದವನ್ನುಂಟುಮಡಬಹುದಲ್ಲವೆ?

    ReplyDelete