FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday, 23 March 2015


23-03-2015
ಕನ್ನಡಿಗರ ಸಂವಿಧಾನ ಬದ್ಧ ಹಕ್ಕನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ.
ಕನ್ನಡ ಅಧ್ಯಾಪಕ ಸಂಘ.
ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಪ್ರತಿಯೊಬ್ಬನಿಗೂ ತನ್ನ ಇಚ್ಚೆಯಂತೆ ಭಾಷೆ ಕಲಿಯುವ ಹಕ್ಕು ಇದೆ. ಕೇರಳದಲ್ಲಿ ಹುಟ್ಟಿ ಕೇರಳದಲ್ಲಿ ಬೆಳೆದು ಕೇರಳದಲ್ಲಿ ಶಿಕ್ಷಣಹೊಂದಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಕೇರಳೀಯರು ಬಹಳಷ್ಟು ಮಂದಿ ಇದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ.ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಯುವಂತೆ ಮಾಡಿ ಮಲಯಾಳ ಕಲಿಕೆಗೆ ಹಿಂದೇಟು ಹಾಕುವ ಮಲಯಾಳಿಗಳಿಗೆ ತಮ್ಮ ಉದ್ಯೋಗಕ್ಕೆ ಸಂಬಂಧಿಸಿ ಮಲಯಾಳ ಗೌಣವಾಗಿ ಬಿಡುತ್ತದೆ. ಅವರೆಲ್ಲರೂ ತಮ್ಮ ನೆಲದಲ್ಲಿ ತಮ್ಮ ಭಾಷೆಯನ್ನು ಅನಾಥವನ್ನಾಗಿ ಮಾಡುತ್ತಿದ್ದಾರೆ.ಇದರಿಂದ ಸೊರಗಿರುವ ಮಲಯಾಳವನ್ನು ಪುನರುತ್ಥಾನಗೊಳಿಸಲು ಮತ್ತು ದೇಶಿಯ ಭಾಷೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಮಲಯಾಳ ಕಡ್ಡಾಯಗೊಳಿಸುವ ಸರಕಾರದ ನಿಲುವು ಸ್ವಾಗತಾರ್ಹ. ಆದರೆ ಕಾಸರಗೋಡಿನ ಕನ್ನಡಿಗರು ಎಲ್ಲಿಂದಲೋ ಬಂದವರಲ್ಲ, ನಮ್ಮ ಹುಟ್ಟೂರು ಇದೇ ಆಗಿದೆ. ಇಲ್ಲಿ ನಮ್ಮ ಇಚ್ಛೆಯಂತೆ ಕನ್ನಡ ಭಾಷೆಯಲ್ಲಿ ಕಲಿಯುವ ಮತ್ತು ವ್ಯವಹರಿಸುವ ಹಕ್ಕು ಸಂವಿಧಾನಬದ್ಧವಾಗಿ ಇದೆ. ಇದು ಯಾರ ಕೊಡುಗೆಯೋ ಔದಾರ್ಯವೋ ಅಲ್ಲ. ಇದನ್ನು ಎಲ್ಲಾ ರಾಜಕೀಯ ನಾಯಕರು, ವಿವಿಧ ಸ್ತರದ ಅಧಿಕಾರಿಗಳು ಅರ್ಥೈಸಿಕೊಳ್ಳಬೇಕು. ಕಾಸರಗೋಡು ಕನ್ನಡಿಗರಿಗೆ ಸಂವಿಧಾನ ಬಧ್ಧವಾಗಿ ಇರುವ ಸವಲತ್ತನ್ನು ಮೊಟಕುಗೊಳಿಸಲು ಯಾವತ್ತೂ ಸಾಧ್ಯವಿಲ್ಲ. ಇಂತಹ ಹುಚ್ಚು ಸಾಹಸಕ್ಕೆ ಸರಕಾರವೂ ಕೈಹಾಕದಿರಲಿ. ಇಲ್ಲಿರುವ ಕನ್ನಡಿಗರನ್ನು ರಾಜಕೀಯ ಅಸ್ತ್ರವಾಗಿ ಉಪಯೋಗಿಸುವ ರಾಜಕಾರಣಿಗಳು ದಯವಿಟ್ಟು ಸರಕಾರವು ಹೇಳಿಕೆ ನೀಡುವಾಗ ಕಾಸರಗೋಡಿನ ಬಗ್ಗೆ ಸಂವಿಧಾನ ಬದ್ಧ ಹಕ್ಕುಗಳ ಉಲ್ಲೇಖವನ್ನು ಮಾಡಲು ಸರಕಾರವನ್ನು ನೆನಪಿಸಬೇಕು ಮತ್ತು ಕನ್ನಡ ಜನಸಾಮಾನ್ಯರ ಗೊಂದಲವನ್ನು ನಿವಾರಿಸಬೇಕು.ಇತ್ತೀಚೆಗೆ ಕಾಸರಗೋಡಿನ ಸ್ಥಿತಿಗತಿಯ ಬಗ್ಗೆ ಸಮನ್ವಯ ಸಮಿತಿಯು ಕೇಂದ್ರ ಸರಕಾರವನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿದ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ವಿವರಣೆ ಕೇಳಿದ್ದರ ಪರಿಣಾಮವಾಗಿ ಜಿಲ್ಲಾಧಿಕಾರಿಗಳು ಕಾಸರಗೋಡಿನ ಎಲ್ಲಾ ಜಿಲ್ಲಾ ಉನ್ನತ ಉದ್ಯೋಗಸ್ಥರಿಗೂ ತಮ್ಮ ಕಛೇರಿಗಳಲ್ಲಿ ಕನ್ನಡ ವ್ಯವಹರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಮತ್ತು ಮಾಡಿದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಬೇಕು ಎ೦ದು ಲಿಖಿತವಾಗಿ ನೀಡಿದ್ದಾರೆ. ಇದನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನದ ಬಗ್ಗೆ ಎಲ್ಲ ವರ್ಗದ ಜನರೂ ತಿಳಿದಿರಬೇಕು. ಕಾಸರಗೋಡಿನ ಮಟ್ಟಿಗೆ ಕನ್ನಡ ಮತ್ತು ಮಲಯಾಳ ದೇಶೀಯ ಭಾಷೆ ಅವುಗಳನ್ನು ಕಲಿಯುವ ಮತ್ತು ಕಲಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಕೈಗೊಳ್ಳಲಿ ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಅಭಿಪ್ರಾಯಪಟ್ಟಿದೆ. ಸಂಘಟನೆಯ ಸದಸ್ಯೆಯಾಗಿದ್ದು ಅಲ್ಪಕಾಲ ಅಸೌಖ್ಯದಿಂದ ನಿಧನರಾದ ಜಿ.ಎಚ್.ಎಸ್.ಎಸ್. ಉಪ್ಪಳ ಶಾಲೆಯ ಶಿಕ್ಷಕಿ ಭಾರತಿಯವರ ಅಗಲುವಿಕೆಗೆಕೆ ಸಂಘಟನೆ ಸಂತಾಪ ವ್ಯಕ್ತಪಡಿಸಿದೆ.

No comments:

Post a Comment