FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 28 December 2014

28-12-2014
ಕನ್ನಡ ಅಧ್ಯಾಪಕ ಸಂಘದ ಕ್ಯಾಲೆಂಡರ್ ಬಿಡುಗಡೆ

ಜನವರಿ 17ರಂದು ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ ಮುಷ್ಕರ.
ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಸಂವಿಧಾನ ಬದ್ಧವಾಗಿ ನೀಡಬೇಕಾದ ಅನೇಕ ಸೌಲಭ್ಯಗಳನ್ನು ನೀಡಲು ಹಿಂದೇಟು ಹಾಕುತ್ತಿರುವ ಅಧಿಕೃತರ ಮಲತಾಯಿ ಧೋರಣೆಯ ವಿರುದ್ಧ ನ್ಯಾಯಯುತ ಹೋರಾಟ ಮಾಡಬೇಕಾಗಿದೆ. ಆದುದರಿಂದ 17-01-2015 ನೇ ತಾರೀಕು ಶನಿವಾರದಂದು ಕಾಸರಗೋಡು ಜಿಲ್ಲೆಯ ನಾಲ್ಕು ಉಪಜಿಲ್ಲಾ ಕಛೇರಿಗಳ ಎದುರು ಧರಣಿ ಮುಷ್ಕರವನ್ನು ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಶಿಕ್ಷಕ ಬಂಧುಗಳು ಈ ಮುಷ್ಕರವನ್ನು ಯಶಸ್ವಿಗೊಳಿಸಬೇಕಾಗಿದೆ. ಹೊಸದುರ್ಗದಲ್ಲಿ ಕನ್ನಡ ಶಿಕ್ಷಕ ಹುದ್ದೆಯನ್ನು ತೊಡೆದು ಹಾಕಿದುದರ ವಿರುದ್ಧ ನಡೆಯುವ ಎಲ್ಲಾ ಹೋರಾಟಗಳಿಗೂ ಅಧ್ಯಾಪಕ ಸಂಘ ತನ್ನ ಬೆಂಬಲ ವ್ಯಕ್ತಪಡಿಸಿದೆ. ಎ೦ದು ಕೇಂದ್ರಾಧ್ಯಕ್ಷ ಟಿ.ಡಿ.ಸದಾಶಿವ ರಾವ್ ನುಡಿದರು.ಬೀರಂತಬೈಲಿನಲ್ಲಿ ನಡೆದ ಕೇಂದ್ರ ಸಭೆಯಲ್ಲಿ ಕನ್ನಡ ಅಧ್ಯಾಪಕ ಸಂಘದ ಕ್ಯಾಲೆಂಡರನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಪ್ರಸ್ತಾವನೆ ನುಡಿದರು. ಕೆ.ವಿ.ಸತ್ಯನಾರಾಯಣ ರಾವ್, ವಿಶಾಲಾಕ್ಷ ಪುತ್ರಕಳ, ಪ್ರಭಾವತಿ ಕೆದಿಲ್ಲಾಯ ಪುಂಡೂರು, ರಾಜೇಶ್ವರ ಸಿ.ಎಚ್, ಪುಷ್ಪ ಕುಮಾರಿ, ಶ್ರೀನಿವಾಸ ರಾವ್, ಪ್ರೀತಂ ಎ.ಕೆ, ಪ್ರದೀಪ್ ಕುಮಾರ್, ಕಷ್ಣೋಜಿ ರಾವ್ ಎ, ಅಶೋಕ್ ಕೊಡ್ಲಮೊಗರು, ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸೂಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಪದ್ಮಾವತಿ ಎ೦ ವಂದಿಸಿದರು.


Saturday, 27 December 2014


-->
27-12-2014
ಜನವರಿ 17ರಂದು ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ ಮುಷ್ಕರ.
ದಿನಾಂಕಃ 17-01-2015 ನೇ ತಾರೀಕು ಶನಿವಾರ
ಸ್ಥಳಃಕಾಸರಗೋಡು ಜಿಲ್ಲೆಯ ನಾಲ್ಕು ಉಪಜಿಲ್ಲಾಶಿಕ್ಷಣಾಧಿಕಾರಿಗಳ ಕಛೇರಿಗಳ ಎದುರು

ಪ್ರಧಾನ ಬೇಡಿಕೆಗಳು.
* ಅಂಗನವಾಡಿಗಳಲ್ಲಿ ಕನ್ನಡದ ಅವಗಣನೆ ನಿಲ್ಲಿಸಬೇಕು.
* ಸರಕಾರದಿಂದ ವಿತರಿಸಲಾಗುವ ರಶೀದಿ, ಅರ್ಜಿ ನಮೂನೆ,ಮತ್ತು     ಮಾಹಿತಿ ಪತ್ರಗಳನ್ನು ಕನ್ನಡದಲ್ಲಿ ನೀಡಬೇಕು.
    * ಜಿ.ಎಚ್.ಎಸ್.ಎಸ್. ಹೊಸದುರ್ಗದಲ್ಲಿ ಸರಕಾರಿ ಆದೇಶದನ್ವಯ ನೆಲೆನಿಂತಿದ್ದ ಶಿಕ್ಷಕ ಹುದ್ದೆಯನ್ನು * ವಿನಾಕಾರಣ ತೊಡೆದುಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
    * ಕನ್ನಡ ಶಿಕ್ಷಕರಿಗೆ ವಿತರಿಸಬೇಕಾದಪಠ್ಯ ಪುಸ್ತಕ ಕೈಪಿಡಿಗಳನ್ನು ಕೂಡಲೇ ಒದಗಿಸಿರಿ.
    * ಇನ್ನೂ ಭಾಷಾಂತರಗೊಳ್ಳದ ಕೈಪಿಡಿಗಳ ಭಾಷಾಂತರವಾಗಲಿ
* ಕನ್ನಡ ಮಾಧ್ಯಮ ಮಕ್ಕಳಿಗೆ ಕಲಿಸಲು ಭಾಷೆತಿಳಿಯದ ಶಿಕ್ಷಕರ        ನೇಮಕಾತಿ ಸಲ್ಲದು.
*ಎಲ್ಲಾ ಕನ್ನಡ ಶಿಕ್ಷಕರಿಗೂ ಬ್ಲೆ೦ಡ್ ತರಬೇತಿ ನೀಡಿ.
* ಎಲ್ಲಾ ಬಿ.ಆರ್.ಸಿ.ಗಳಲ್ಲಿ ಸಾಕಷ್ಟು ಕನ್ನಡ ತರಬೇತುದಾರರನ್ನು ನೇಮಿಸಿರಿ.
* ಆರ್.ಎ೦.ಎಸ್..ಶಾಲೆಗಳಿಗೆ ಸೌಕರ್ಯ ಕಲ್ಪಿಸಿರಿ.

ಭಾಗವಹಿಸಿರಿ ಯಶಸ್ವಿಗೊಳಿಸಿರಿ



Saturday, 20 December 2014


20-12-2014
ಮಕ್ಕಳ ಸಾಹಿತ್ಯ ಸಂಗಮ ಕಾಸರಗೋಡು ಗಡಿನಾಡ ಘಟಕ
ಸೂರಂಬೈಲು ಶಾಲೆಯಲ್ಲಿ ಕವಿಕಾವ್ಯ ಸಂವಾದ





ಸೂರಂಬೈಲು, ಸಾಹಿತ್ಯಾಸಕ್ತಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವ ಪ್ರಬಲ ಮಾಧ್ಯಮವಾಗಿದೆ. ಎಳೆವೆಯಲ್ಲಿಯೇ ಒಳ್ಳೊಳ್ಳೆಯ ಸಾಹಿತ್ಯಗಳನ್ನು ಓದುವುದು, ವಿಮರ್ಶಿಸುವುದರಿಂದ ನಮ್ಮ ಚಿಂತನಾ ಸಾಮರ್ಥ್ಯ ಹೆಚ್ಚುವುದು. ಉತ್ತಮ ಓದುವಿಕೆಯಿಂದ ಸಮಾಜ ಮೆಚ್ಚುವಂತೆ ವ್ಯವಹರಿಸುವ ಗುಣವೂ ಮೈಗೂಡುತ್ತದೆ. ಜತೆಗೆ ಸಾಹಿತ್ಯ ರಚನೆಗೆ ಪ್ರೇರಣೆಯೂ ದೊರೆಯುತ್ತದೆ. ಆದುದರಿಂದ ಮಕ್ಕಳಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು ಹೆಚ್ಚು ಹೆಚ್ಚು ಸಿಗುವಂತಾಗಲಿ, ಎ೦ದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿಯವರು ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಕಾಸರಗೋಡು ಘಟಕದ ವತಿಯಿಂದ ಜರಗಿದ ಕವಿಕಾವ್ಯ ಸಂವಾದದ ಉದ್ಘಾಟನೆಗೈದು ಮಾತನಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಾಣಿ ಪಿ.ಎಸ್. ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್, ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಗಳ ಪ್ರಬಂಧಕರಾದ ಜಯದೇವ ಖಂಡಿಗೆ, ಸೂರಂಬೈಲು ಶಾಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್,ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ,ಮಕ್ಕಳ ಸಾಹಿತ್ಯಸಂಗಮ ಕೇಂದ್ರ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸರಾವ್ ಮತ್ತು ಸಾವಿತ್ರಿ ಎಸ್.ರಾವ್ ಉಪಸ್ಥಿತರಿದ್ದರು.ಹಿರಿಯ ಶಿಕ್ಷಣ ತಜ್ಞರಾದ ವಿ.ಬಿ.ಕುಳಮರ್ವ ಪ್ರಸ್ತಾವನಾ ಭಾಷಣ ಮಾಡಿದರು.ಕಾರ್ಯದರ್ಶಿಗಳಾದ ಬಾಲ ಮಧುರಕಾನನ ಸ್ವಾಗತಿಸಿ, ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು. ಕುಮಾರಿ ಚೈತ್ರಾ ಎಸ್ ನಿರೂಪಣೆಗೈದಳು.
ಉದ್ಘಾಟನೆಯ ಬಳಿಕ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಕ್ಕಳಿಂದ ಮೂಡಿಬಂದ ಕೆಲವು ಪ್ರಧಾನ ಪ್ರಶ್ನೆಗಳು ಇಂತಿದ್ದವು.
*ಬಾಲ್ಯದಲ್ಲಿ ನಿಮಗೆ ಸಾಹಿತ್ಯಾಭಿರುಚಿ ಉಂಟಾದ ಬಗೆ ಹೇಗೆ?
    * ಸಾಹಿತ್ಯ ರಚನೆಗೆ ಸ್ಪೂರ್ತಿ ಯಾರು?
    * ನಿಮ್ಮ ಸಾಹಿತ್ಯವು ಮೊದಲಿಗೆ ಪ್ರಕಟವಾದಾಗ ನಿಮಗಾದ ಅನುಭವವೇನು ?
    *ವೃತ್ತಿಜೀವನಕ್ಕೆ ಸೇರಿದಾಗ ನಿಮ್ಮ ಸಾಹಿತ್ಯದ ಒಲವನ್ನು ಉಳಿಸಿಕೊಂಡದ್ದು ಹೇಗೆ?
    * ವೃತ್ತಿ ಜೀವನದಲ್ಲಿ ಸಾಹಿತ್ಯ ಪ್ರೇರಣೆಗೆ ಸಂಬಂಧಿಸಿದ ಘಟನೆಗಳು ಏನಾದರೂ ಇದೆಯೇ?
    * ನೀವು ಆದರ್ಶಪ್ರಾಯರೆಂದು ಗುರುತಿಸುವ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ?
* ನಿಮ್ಮ ಸಾಹಿತ್ಯ ಒಡನಾಡಿಗಳು ಯಾರುಯಾರು?
*ಪುಸ್ತಕ ಪ್ರಕಟನೆಯ ವಿಶೇಷ ಅನುಭವಗಳು ಏನಾದರೂ ಇದೆಯೇ?
* ಸಾಹಿತ್ಯ ಪ್ರಚಾರಕ್ಕಾಗಿ ನೀವು ಮಾಡಿದ ಕಾರ್ಯಗಳು ಏನು?
* ನಿವೃತ್ತಿಯ ನಂತರ ನಿಮ್ಮ ಸಾಹಿತ್ಯ ರಚನೆ ಹೇಗಿದೆ?
*ನೀವು ಪ್ರಕಟಿಸಿದ ಸಾಹಿತ್ಯ ಪ್ರಕಾರಗಳು ಯಾವುವು?
*ಅಪ್ರಕಟಿತ ಕೃತಿಗಳು ಯಾವುದಾದರೂ ಇದೆಯೇ?
*ಅಂಕಣ ಬರಹಗಳನ್ನು ಯಾವ ಯಾವ ಪತ್ರಿಕೆಗಳಿಗೆ ಬರೆಯುತ್ತೀರಿ?
*ಸಾಹಿತ್ಯ ಸೇವೆಯ ಮುಂದಿನ ಯೋಜನೆಗಳೇನು?
*ವಿದ್ಯಾರ್ಥಿಗಳಿಗೆ ನೀವು ನೀಡುವ ಸಂದೇಶ ಮತ್ತು ಮಾರ್ಗದರ್ಶನವೇನು?
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಸಾಹಿತಿಗಳು ತುಂಬಾ ತಾಳ್ಮೆಯಿಂದಲೆ ಉತ್ತರಿಸಿದರು.

ಅಪರಾಹ್ನ ಡಾ/ ರಮಾನಂದ ಬನಾರಿಯವರೊಂದಿಗೆ ಸಾಹಿತ್ಯ, ಯಕ್ಷಗಾನ ಕಲೆಯ ಕುರಿತು ಮಕ್ಕಳು ಪ್ರಶ್ನೆ ಕೇಳಿದರು.
ಬನಾರಿಯವರು ಸಮರ್ಪಕವಾಗಿ ಉತ್ತರಿಸಿದರು. ಕಾರ್ಯಕ್ರಮದ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯ ರಸಪ್ರಶ್ನೆ ಜರಗಿತು. ಬನಾರಿಯವರ ಆಯ್ದ ಕವನಗಳನ್ನು ಮಹಾಜನ ಸಂಸ್ಕೃತ ವಿದ್ಯಾಲಯದ ಮಕ್ಕಳು ಮತ್ತು ಅರ್ತಿಕಜೆಯವರ ರಾಮಾಯಣದ ಕೆಲವು ಹಾಡುಗಳನ್ನು ಅನುಷಾ ಎಸ್.ಮಯ್ಯ ಹಾಡಿದರು. ಭಾಗವಹಿಸಿದ ಮಕ್ಕಳಿಗೆ ಪ್ರಶಂಸಾಪತ್ರ, ಬನಾರಿಯವರ ಕೊಳಲು ಪುಸ್ತಕ ಮತ್ತು ಶಾಲೆಗಳಿಗೆ ಸ್ಮರಣಿಕೆ ನೀಡಲಾಯಿತು. ತೊಂಭತ್ತೆಂಟು ಸಾಹಿತ್ಯಾಸಕ್ತ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹರೀಶ್ ಪೆರ್ಲ, ಕೃಷ್ಣೋಜಿ ರಾವ್, ಪಾರ್ವತಿ ಕೆ, ಮೊದಲಾದವರು ಉಪಸ್ಥಿತರಿದ್ದರು.

Monday, 1 December 2014

-->
1-12-2014
ಕಾಸರಗೋಡಿನಲ್ಲಿ ಕನ್ನಡಕ್ಕೆ ಕನ್ನ ಹಾಕುವ ಹುನ್ನಾರ ಸಲ್ಲದು. ಕನ್ನಡ ಅಧ್ಯಾಪಕ ಸಂಘ.
ಕನ್ನಡ ಶಾಲೆಗಳಲ್ಲಿ ಅದೆಷ್ಟೋ ಹುದ್ದೆಗಳು ಬಾಕಿ ಇದ್ದು ಅವುಗಳನ್ನು ಭರ್ತಿಗೊಳಿಸಲು ಕನ್ನಡ ಭಾಷೆ ತಿಳಿಯದ ಅಭ್ಯರ್ತಿಗಳು ಸಾಲಾಗಿ ನಿಂತಿದ್ದು ಇವರನ್ನು ಅಡ್ಡ ದಾರಿಯಲ್ಲಿ ಕನ್ನಡ ಅಧ್ಯಾಪಕ ಹುದ್ದೆಗೆ ಬರಲು ಅವಕಾಶ ನೀಡಬಾರದು.
ಕನ್ನಡ ಮಾಧ್ಯಮದಲ್ಲಿ ಪಾಠ ಮಾಡಲು ಶಿಕ್ಷರನ್ನು ನೇಮಿಸುವಾಗ ಅಭ್ಯರ್ಥಿಗಳಿಗೆ ಕನ್ನಡ ಮಾಧ್ಯಮದ ಪಠ್ಯಪುಸ್ತಕ ನೀಡಿ ಕನಿಷ್ಟ ಮೂರು ಗಂಟೆಯಾದರು ಮೌಖಿಕ ಪರೀಕ್ಷೆ ನಡೆಸಬೇಕು. ಒಂದರಿಂದ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಅಭ್ಯರ್ಥಿಗಳು ಮಾತ್ರವೇ ಇಂತಹ ಹುದ್ದೆಗೆ ಅರ್ಹರೆಂಬ ವಾದವನ್ನು ಈ ಹಿಂದೆ ಕನ್ನಡ ಸಂಘಟನೆಗಳು ನೀಡಿವೆ.ಇವು ಇನ್ನೂ ಸರಕಾರದ ಪರಿಗಣನೆಯಲ್ಲಿವೆ. ಈ ಸ್ಥಿತಿಯಲ್ಲಿ ಇನ್ನೊಂದು ಪ್ರಹಾರವನ್ನು ಎದುರಿಸಲು ಖಂಡಿತಾ ಕನ್ನಡಿಗರು ಸಿದ್ದರಿಲ್ಲ.
ಹೊಸ ದುರ್ಗದ ಯು.ಪಿ.ವಿಭಾಗದ ಶಿಕ್ಷಕ ಹುದ್ದೆ ಮಂಗ ಮಾಯ
ಜಿ.ಎಚ್.ಎಸ್.ಹೊಸದುರ್ಗದಲ್ಲಿ ಸರಕಾರದ ವಿಶೇಷ ಆದೇಶದಂತೆ ಯು.ಪಿ.ವಿಭಾಗದ ಶಿಕ್ಷಕ ಹುದ್ದೆನ್ನು ಉಳಿಸಿಕೊಳ್ಳಲಾಗಿತ್ತು, ಇದನ್ನು ಇದ್ದಕ್ಕಿದ್ದಂತೆಯೇ ಇಲ್ಲದಾಗಿಸಿದ ಹೊಸದುರ್ಗ ಜಿಲ್ಲಾಶಿಕ್ಷಣಾಧಿಕಾರಿಯ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದೂ ಶಿಕ್ಷಕ ಹುದ್ದೆಯನ್ನು ಪುನ ಸ್ಥಾಪಿಸಬೇಕೆಂದೂ ಸಂಘಟನೆ ಒತ್ತಾಯಿಸಿದೆ. ಜಿಲ್ಲೆಯಲ್ಲಿ ಹೊಸದಾಗಿ ಸೇರಿದ ಎಲ್ಲಾ ಅಧ್ಯಾಪಕ ಹುದ್ದೆಗಳನ್ನು ಕೂಡಲೆ ಅಂಗೀಕರಿಸಬೇಕೆಂದೂ ಇದಕ್ಕೆ ಅಡ್ಡಿಯಾದ ಎಲ್ಲಾ ತಡೆಯನ್ನೂ ಸರಕಾರ ನಿಯಮಾನುಸಾರ ತೊಡೆದುಹಾಕಿದೆ ಎ೦ದು ಅಧಿಕೃತರು ತಿಳಿಸಿದ್ದಾರೆ.
ಅಂಗನವಾಡಿಗಳಲ್ಲಿ ಕನ್ನಡಕ್ಕೆ ಕುತ್ತು.
ಶಿಶು ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸಲ್ಪಡುವ ಅಂಗನವಾಡಿಗಳಲ್ಲಿ ಕನ್ನಡ ಬೋಧಿಸಲು ಸಿಲಬಸ್ ಲಭ್ಯವಿಲ್ಲ. ಕೇವಲ ಮಲಯಾಳದಲ್ಲಿ ತಯಾರಾದ ಸಿಲಬಸ್ ನ್ನು ಕನ್ನಡ ಶಿಕ್ಷಕಿಯರಿಗೆ ನೀಡಿ ವಂಚಿಸಲಾಗುತ್ತಿದೆ. ಇಲ್ಲಿ ಸಂವಿಧಾನ ಬದ್ದವಾಗಿ ಕನ್ನಡ ಕಲಿಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ.ಅದಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸುವ ಜವಾಬ್ದಾರಿ ಸರಕಾರಕ್ಕಿದೆ. ಇದನ್ನು ತಿಳಿಯದ ಅಧಿಕಾರಿಗಳಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ತಳಮಟ್ಟದಿಂದಲೇ ಆಗಬೇಕಾಗಿದೆ. ಮಲಯಾಳದಲ್ಲಿ ತಯಾರಾದ ಸಿಲೆಬಸ್ ಪುಸ್ತಕಕ್ಕೆ ಸಮಾನಾಂತರವಾಗಿ ಕನ್ನಡದಲ್ಲಿಯೂ ತಯಾರಿಸಿ ಕಾಸರಗೋಡಿನಲ್ಲಿರುವ ಎಲ್ಲಾ ಅಂಗನವಾಡಿಗಳಿಗೂ ವಿತರಿಸಬೇಕೆಂದು ಸಂಘಟನೆ ಅಧಿಕೃತರನ್ನು ಒತ್ತಾಯಿಸಿದೆ.
ಸರಕಾರದಿಂದ ವಿತರಿಸಲಾಗುವ ರಶೀದಿ, ಅರ್ಜಿ ಫೋರ್ಮ್ ಮಲಯಾಳಮಯ.
ಕಾಸರಗೋಡಿನ ಹಿಂದುಳಿಯುವಿಕೆಗೆ ಕಾರಣವಾದ ಅನೇಕ ವಿಷಯಗಳಲ್ಲಿ ಇದೂ ಒಂದು. ಕನ್ನಡಿಗರಿಗೆ ಭಾಷೆ ತಿಳಿಯದ ಫೋರ್ಮ್ ವಿತರಿಸುವ ಪ್ರಕ್ರಿಯೆ ಇನ್ನೂ ಮುಂದುವರಿಸಿದ್ದಾದಲ್ಲಿ ಅವುಗಳನ್ನು ಬರೆಯಿಸುವ ಶುಲ್ಕವನ್ನು ಸಂಬಂಧಪಟ್ಟ ಇಲಾಖಾ ವತಿಯಿಂದ ಒದಗಿಸಬೇಕೆಂದು ನ್ಯಾಯಾಲಯದ ಮೊರೆಹೋಗಬೇಕೆಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ನಮ್ಮ ಸವಲತ್ತನ್ನು ಕಸಿದುಗೊಳ್ಳುವ ಯಾವುದೇ ಷಡ್ಯಂತ್ರಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಎಲ್ಲ ಕನ್ನಡಿಗರೂ ಒಟ್ಟಾಗಬೇಕೆಂದು ಸಂಘಟನೆ ಕರೆ ನೀಡಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಇದರ ಪ್ರಯುಕ್ತ
ಸಂಘಟನೆಯ ಕೇಂದ್ರ ಸಭೆಯು ಟಿ.ಡಿ.ಸದಾಶಿವ ರಾವ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಅಧ್ಯಾಪಕಭವನದಲ್ಲಿ ಜರಗಿತು. ಕೆ.ವಿ.ಸತ್ಯನಾರಾಯಣ ರಾವ್, ಪ್ರಭಾವತಿ ಕೆದಿಲ್ಲಾಯ ಪಿ, ಅಬ್ದುಲ್ ರಹಿಮಾನ್ ಎ, ಬಾಬು ಕೆ, ಅಮಿತಾ ಎಚ್, ಕೃಷ್ಣೋಜಿ ರಾವ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ಇತ್ತೀಚೆಗೆ ಅಡ್ಕತ್ತಬೈಲು ಮತ್ತು ಮುನ್ಸಿಪಲ್ ಸ್ಟೇಡಿಯಂನಲ್ಲಿ ಜರಗಿದ ರಾಜ್ಯ ಮಟ್ಟದ ಕ್ರೀಡಾ ಕೂಟದ ನಿರ್ವಹಣೆಗಾಗಿ ನಿಯೋಜಿಸಲ್ಪಟ್ಟ ವೆಲ್ಫೇರ್ ಸಮಿತಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರನ್ನೂ ಅಭಿನಂದಿಸಲಾಯಿತು.ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಪದ್ಮಾವತಿ ಎ೦ ವಂದಿಸಿದರು.