FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday, 16 September 2023

ಅಧ್ಯಾಪಕರ ಸಂಘದ ವತಿಯಿಂದ ಎಸ್. ವಿ. ಭಟ್ ರವರಿಗೆ ನುಡಿ ನಮನ:

            ಕಾಸರಗೋಡಿನ ಕನ್ನಡದ ಕಂಪನ್ನು ಕಳೆಗುಂದದಂತೆ ಕಾಪಾಡಲು ಇಲ್ಲಿನ ಅದೆಷ್ಟೋ ಮಂದಿ ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ ಮಾಡುತ್ತಿರುವ ಕನ್ನಡದ ಮನಸ್ಸುಗಳ ಕಾರ್ಯದಿಂದಾಗಿ ಕಾಸರಗೋಡಿನಲ್ಲಿ ಇಂದಿಗೂ ಕನ್ನಡದ ಕಹಳೆ ಸದಾ ಮೊಳಗುತ್ತಿದೆ. ಕಾಸರಗೋಡು ಕನ್ನಡಿಗರಿಗೆ ಹೋರಾಟದ ಬದುಕಾಗಿ ಕಂಡರೂ ಅದನ್ನು ಸಮರ್ಥವಾಗಿ ಎದುರಿಸಿ, ಸವಾಲಾಗಿಸಿದವರೇ ಹೆಚ್ಚು. ಅಂತಹ ಧೀಮಂತ ಕನ್ನಡ ಪ್ರೇಮಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಘಟಕದ ಅಧ್ಯಕ್ಷರಾದ ಎಸ್. ವಿ. ಭಟ್ ಕೂಡಾ ಒಬ್ಬರು. ಕನ್ನಡದ ಬಗೆಗಿನ ಒಲವನ್ನು ಅವರ ದಿನನಿತ್ಯದ ಕಾರ್ಯಚಟುವಟಿಕೆಗಳೇ ಸಾರುತ್ತವೆ. ಅಂತಹ ಅಪ್ಪಟ ಕನ್ನಡ ಪ್ರೇಮಿಯನ್ನು ಕಳೆದುಕೊಂಡು ಕಾಸರಗೋಡಿನ ಕನ್ನಡಿಗರು ಈಗ ಬಡವಾಗಿದ್ದಾರೆ. ಅವರ ಚಿರಸ್ಮರಣೆಯನ್ನು ಮಾಡುತ್ತಾ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಎಸ್. ವಿ. ಭಟ್ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಸಲಾಯಿತು. 
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ಪಿ. ಬಿ. ವಹಿಸಿ, ಎಸ್. ಭಟ್ ರ ನೆನಪುಗಳನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಹಾಗೂ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಬೇಳರವರು ನುಡಿ ನಮನವನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಶ್ರೀ ಸುಕೇಶ್ ಎ, ಕಾಸರಗೋಡು ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ವಿನೋದ್ ರಾಜ್ ಪಿ. ಕೆ ಉಪಸ್ಥಿತರಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಸಮಿತಿಯ ಕೋಶಾಧಿಕಾರಿ ಶ್ರೀ ಜೀವನ್ ಕುಮಾರ್ ವಂದಿಸಿದರು.





No comments:

Post a Comment