FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday 8 August 2022

ಆದೂರು ಪ್ರೌಢ ಶಾಲೆಯ ಸಮಸ್ಯೆ ಸರಿಪಡಿಸಲು ಸಂಘಟನೆಯ ನಿಯೋಗದಿಂದ ಶಾಸಕರ ಭೇಟಿ

        ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರ ನೇಮಕದ ಗೋಳು ಇಂದು ನಿನ್ನೆಯದಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಮತ್ತೇ ಮತ್ತೆ ಇಂತಹ ನೇಮಕಾತಿ ನಡೆಸಿ ಕನ್ನಡದ ಮಕ್ಕಳ ಭವಿಷ್ಯವನ್ನು ಡೋಲಾಯಮಾನವಾಗಿಸುತ್ತಿದೆ. 

     ಇದೀಗ ಕುಂಬಳೆ ಉಪ ಜಿಲ್ಲೆಗೆ ಒಳಪಟ್ಟ ಆದೂರು ಸರಕಾರಿ ಪ್ರೌಢ ಶಾಲೆಗೆ ಕನ್ನಡೇತರ ಅಧ್ಯಾಪಕರ ನೇಮಕಾತಿ ಆಗಿದ್ದು ಎಲ್ಲಾ ಕನ್ನಡಿಗನೆಂದು ಮತ್ತೆ ಕೆರಳಿಸುವಂತೆ ಮಾಡಿದೆ. ಆ ಶಾಲೆಯ ಕನ್ನಡ ವಿಭಾಗದ ತರಗತಿಯ ಭೌತ ಶಾಸ್ತ್ರ ಪಾಠ ಮಾಡಲು ಕನ್ನಡ ಸ್ಪಷ್ಟವಾಗಿ ಅರಿಯದ ಅಧ್ಯಾಪಕರು ನೇಮಕವಾಗಿರುತ್ತಾರೆ. ಆದರೆ ಈಗಲೂ ಅವರಿಗೆ ಸ್ಪಷ್ಟವಾಗಿ ಕನ್ನಡ ಓದಲು ಮತ್ತು ಬರೆಯಲು ತಿಳಿದಿಲ್ಲ. ಕೇವಲ ಕನ್ನಡ ಪ್ರಾವೀಣ್ಯತೆಯನ್ನು ಪಡೆದ ಪ್ರಮಾಣ ಪತ್ರ ಪಡೆದು ಕಾನೂನು ಪ್ರಕಾರ ಹುದ್ದೆಯನ್ನು ಮತ್ತೆ ಪಡೆದುಕೊಂಡಿದ್ದಾರೆ.

      ಬಂದಿರುವಂತಹ ಕನ್ನಡೇತರ ಅಧ್ಯಾಪಕರು ಈ ಹಿಂದೆ ಪೈವಳಿಕೆ ಸರಕಾರಿ ಪ್ರೌಢ ಶಾಲೆಗೆ ನೇಮಕವಾಗಿದ್ದರು. ಆದರೆ ಕನ್ನಡ ತಿಳಿಯದ ಕಾರಣ ಎಲ್ಲರ ಪ್ರತಿಭಟನೆಯ ಫಲವಾಗಿ ಒಂದು ವಾರದ ಬಳಿಕ 6 ತಿಂಗಳ ಕಾಲ ವೇತನವಿಲ್ಲದ ರಜೆಯ ಮೇಲೆ ತೆರಳಲು ಆದೇಶ ನೀಡಲಾಗಿತ್ತು.

       ಇದೇ ಸಂದರ್ಭದಲ್ಲಿ ಕೋರ್ಟಿನ ಆದೇಶದಂತೆ ಇವರು ಕನ್ನಡ ಪ್ರಾವೀಣ್ಯತೆಯನ್ನು ಪಡೆಯುವುದಕ್ಕಾಗಿ ಮೈಸೂರಿಗೆ ತೆರಳಿ, ಆ ಪ್ರಕಾರ ತರಬೇತಿ ಪಡೆದು ಪುನಃ ಹುದ್ದೆಗೆ ಮರು ಸೇರ್ಪಡೆಗೆ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಇದೀಗ ಆದೂರು ಸರಕಾರಿ ಪ್ರೌಢ ಶಾಲೆಗೆ ಪುನಃ ಸೇರ್ಪಡೆಗೊಂಡಿದ್ದಾರೆ.

       ಕನ್ನಡದ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ನೇತೃತ್ವದಲ್ಲಿ ನಿಯೋಗವೊಂದು ಮಂಜೇಶ್ವರ ಶಾಸಕರಾದ ಎ. ಕೆ. ಎಂ ಅಶ್ರಫ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಸೇರ್ಪಡೆಗೊಂಡ ಕನ್ನಡೇತರ ಅಧ್ಯಾಪಕರ ನೇಮಕಾತಿಯನ್ನು ತಡೆ ಹಿಡಿಯಬೇಕು, ಇಲ್ಲವೇ ಅವರನ್ನು ಕನ್ನಡ ಮಕ್ಕಳು ಇಲ್ಲದ ಇತರ ಕಚೇರಿಗಳಿಗೆ ವರ್ಗಾಯಿಸಿ ಕನ್ನಡದ ಮಕ್ಕಳಿಗೆ ಆಗುವ ಅನ್ಯಾಯವನ್ನು ಕೊನೆಗೊಳಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

         ಈ ಬಗ್ಗೆ ಶಾಸಕರು ಈ ನೇಮಕಾತಿಯನ್ನು ಪ್ರಬಲವಾಗಿ ವಿರೋಧಿಸುತ್ತಾ, ಈ ಸಮಸ್ಯೆ ಪರಿಹರಿಸಲು ಎಲ್ಲಾ ಕನ್ನಡ ಸಂಘಟನೆಗಳು ಒಗ್ಗೂಡಬೇಕು, ಎಲ್ಲಾ ಕನ್ನಡಿಗರಿಂದ ಪ್ರಬಲವಾದ ಹೋರಾಟ ನಡೆಯಬೇಕು, ಮುಂದಿನ ದಿನದಲ್ಲಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅದರ ವರದಿಯನ್ನು ಸಂಬಂಧ ಪಟ್ಟವರಿಗೆ ತಿಳಿಸಿ, ಸರಿಪಡಿಸುವ ಭರವಸೆ ನೀಡಿದರು.

          ನಿಯೋಗದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿ. ಬಿ, ಉಪಾಧ್ಯಕ್ಷರಾದ ಸುಕೇಶ್ ಎ, ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಕೋಶಾಧಿಕಾರಿ ಪದ್ಮಾವತಿ ಎಂ, ಸದಸ್ಯರಾದ ಸುನೀತಾ ಕೆ ಉಪಸ್ಥಿತರಿದ್ದರು.




No comments:

Post a Comment