ಭಾಷಾ ಅಲ್ಪ ಸಂಖ್ಯಾತರ ಪ್ರದೇಶವಾದ ಕಾಸರಗೋಡಿನಲ್ಲಿ ಸಾಂವಿಧಾನಿಕವಾಗಿ ಭಾಷಾ ಅಲ್ಪ ಸಂಖ್ಯಾತರ ಹಕ್ಕನ್ನು ಹೊಂದಿದ್ದರೂ ಕನ್ನಡಿಗರು ಅನುಭವಿಸುವ ಕಷ್ಟ ಇಂದು ನಿನ್ನೆಯದಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರ ನೇಮಕ ಈ ಹಿಂದೆ ಅನೇಕ ಬಾರಿ ನಡೆದು, ತೀವ್ರ ಪ್ರತಿರೋಧ ಎದುರಿಸಿದರೂ ಇದೀಗ ಮತ್ತೆ ಕನ್ನಡೇತರ ಅಧ್ಯಾಪಕರ ನೇಮಕವನ್ನು ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಅಂಗಡಿಮೊಗರು ಸರಕಾರಿ ಪ್ರೌಢ ಶಾಲೆಯ ಕನ್ನಡ ವಿಭಾಗಕ್ಕೆ ಕನ್ನಡೇತರ ಅಧ್ಯಾಪಕರ ನೇಮಕದ ಆದೇಶ ಆಗಿದ್ದು, ಈ ಬಗ್ಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಶಾಲೆಗೆ ಭೇಟಿ ನೀಡಿ, ಈ ನೇಮಕಾತಿಯ ವಿರುದ್ಧ ತೀವ್ರವಾಗಿ ಖಂಡನೆಯನ್ನು ವ್ಯಕ್ತಪಡಿಸಿತು. ಈ ಹಿಂದೆ ಆದ ಇಂತಹ ನೇಮಕಾತಿಗಳ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಮತ್ತೆ ಇಂತಹ ನೇಮಕಾತಿಯನ್ನು ಮಾಡುವ ಮೂಲಕ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಮತ್ತೊಮ್ಮೆ ಕಸಿದುಕೊಂಡಂತಾಗಿದೆ, ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಕನ್ನಡ ಮಕ್ಕಳ ಭವಿಷ್ಯವನ್ನು ಕಾಪಾಡಬೇಕೆಂದು ಆಗ್ರಹಿಸಿದೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ, ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪದ್ಮಾವತಿ ಎಂ, ಕುಂಬಳೆ ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಎಸ್, ಕೋಶಾಧಿಕಾರಿ ಶರತ್ ಕುಮಾರ್, ಸದಸ್ಯರಾದ ನಯನ ಪ್ರಸಾದ್ ಎಚ್. ಟಿ, ಗುರುರಾಜ್ ಮೊದಲಾದವರು ಒಳಗೊಂಡ ನಿಯೋಗವು ಶಾಲೆಗೆ ಭೇಟಿ ನೀಡಿ, ನೇಮಕಾತಿಯನ್ನು ತಡೆ ಹಿಡಿಯಲು ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದೆ.
No comments:
Post a Comment