FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday, 22 April 2022

ಜಿಲ್ಲಾಧಿಕಾರಿ, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿಗಳ ಭೇಟಿ : ಮನವಿ ಸಲ್ಲಿಕೆ

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ನಿಯೋಗವು ಇಂದು ಕಾಸರಗೋಡು ಜಿಲ್ಲಾಧಿಕಾರಿ, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಭೇಟಿಯಾಗಿ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರನ್ನು ಮುಖ್ಯ ಶಿಕ್ಷಕರನ್ನಾಗಿ ನೇಮಿಸುವ ವಿರುದ್ಧ ಮನವಿಯನ್ನು ಸಲ್ಲಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಮನವಿ ಸಲ್ಲಿಸಲಾಯಿತು.

         ಜೊತೆಗೆ ಇತ್ತೀಚೆಗೆ ಕನ್ನಡ ಅಧ್ಯಾಪಕರಿಗೆ ಲೈಫ್ ಮಿಷನ್ ಕಾಸರಗೋಡು ಇದರ ಸರ್ವೆ ನಡೆಸಲು ಬಂದಿದ್ದು, ಅದರ ಮಾಹಿತಿಗಳು ಕನ್ನಡದಲ್ಲಿ ನೀಡುವಂತೆ ಮತ್ತೊಮ್ಮೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ನವೀನ್ ಕುಮಾರ್, ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಬಾಬು ಕೆ ಇದ್ದರು. ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಭರವಸೆ ನೀಡಿದರು.





Saturday, 9 April 2022

ವಿದಾಯ ಕೂಟ ಸಮಾರಂಭ 2021-22

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2021-22 ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಶಿಕ್ಷಕಿಯರಿಗೆ ವಿದಾಯ ಕೂಟ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.

        ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ, ಅಡ್ವಕೇಟ್ ಎನ್ ಕೆ ಮೋಹನ್ ದಾಸ್ ಉದ್ಘಾಟಿಸಿ, "ನಿವೃತ್ತರು ತಮಗೆ  ಸರಕಾರದಿಂದ ದೊರಕುವ ಪಿಂಚಣಿಯಿಂದ ಸಮಾಧಾನದ ಜೀವನವನ್ನು ಸಾಗಿಸುವುದರೊಂದಿಗೆ ಕನ್ನಡದ ಋಣವನ್ನು ತೀರಿಸುವ ಕೆಲಸವನ್ನು ಪ್ರವೃತ್ತಿಯಾಗಿಸಿಕೊಳ್ಳಬೇಕು" ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ ಬಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್, ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಪಡೆದ ನಾರಾಯಣ ದೇಲಂಪಾಡಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ  ಅಗಸ್ಟಿನ್ ಬರ್ನಾಡ್ ಉಪಸ್ಥಿತರಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ವಕ್ತಾರರಾದ ರವೀಂದ್ರನಾಥ್ ಕೆ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
         2021-22 ನೇ ಸಾಲಿನಲ್ಲಿ ನಿವೃತ್ತಿ ಹೊಂದುವ ಕನ್ನಡ ಮಾಧ್ಯಮದ ಶಿಕ್ಷಕ ಶಿಕ್ಷಕಿಯರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ, ಕರ್ನಾಟಕ ಸರಕಾರದ ಗಡಿ ಪ್ರಾಧಿಕಾರದ ವತಿಯಿಂದ ಕಯ್ಯಾರ ಕಿಞ್ಞಣ್ಣ ರೈ ರಾಜ್ಯ ಪ್ರಶಸ್ತಿಯನ್ನು ಪಡೆದ ಗಡಿನಾಡ ಕನ್ನಡ ಸಂತ ಪುರುಷೋತ್ತಮ ಕೆ ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ತುಳು ಯಕ್ಷಗಾನ - ಪರಂಪರೆ ಮತ್ತು ಪ್ರಯೋಗ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕುಂಬಳೆ ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ ಹಾಗೂ ಅಧ್ಯಾಪಕ ವೃತ್ತಿಯೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ರಾಜು ಕ್ರಾಸ್ತಾ ಕಿದೂರು ರವರನ್ನು ಸಂಘಟನೆಯ ಪರವಾಗಿ ಅಭಿನಂದಿಸಲಾಯಿತು.
       ಕಾರ್ಯಕ್ರಮದಲ್ಲಿ ಅಧ್ಯಾಪಕ ಸಂಘದ ವಿವಿಧ ಹುದ್ದೆಗಳನ್ನಲಂಕರಿಸಿದ್ದ ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿಗಳು, ಉಪಜಿಲ್ಲಾ ವಿದ್ಯಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.
        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ಪದ್ಮಾವತಿ ಎಂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.