FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday, 12 March 2022

ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಭೆ

          ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಇಂದು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನದಲ್ಲಿ ನಡೆಯಿತು.

         ಸಭೆಯ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ರಾವ್ ಪಿ. ಬಿ ವಹಿಸಿದ್ದರು. ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ, ಕೋಶಾಧಿಕಾರಿ ಪದ್ಮಾವತಿ ಎಂ, ಸದಸ್ಯರಾದ ಯಶೋಧಾ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀರಾಮ ಕೆದುಕೋಡಿ ವಂದಿಸಿದರು. ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಜರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು.




ಶಿಕ್ಷಣ ಇಲಾಖೆಯ ಪರೀಕ್ಷಾ (Department Test) ತಯಾರಿಗೆ ತರಬೇತಿ

           ಕನ್ನಡ ಮಾಧ್ಯಮ ಶಾಲೆಗಳ ಅಧ್ಯಾಪಕರು ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಲು ಬೇಕಾದ ಶಿಕ್ಷಣ ಇಲಾಖೆಯ ಪರೀಕ್ಷೆಗೆ ಸಂಬಂಧಿಸಿ ಇಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ವತಿಯಿಂದ ಪರೀಕ್ಷಾ ತಯಾರಿಗೆ ನಡೆಸುವ ತರಬೇತಿಯ ಉದ್ಘಾಟನೆಯು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನದಲ್ಲಿ ನಡೆಯಿತು. 

           ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿ ನಾಡ ಘಟಕದ ಅಧ್ಯಕ್ಷರಾದ ಶ್ರೀ ಎಸ್.ವಿ ಭಟ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧಿಕೃತ ವಕ್ತಾರರಾದ ಶ್ರೀ ರವೀಂದ್ರನಾಥ್ ಕೆ ಆರ್, ಮಂಜೇಶ್ವರ ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ಉಮೇಶ್ ಕೆ, ಕಾಸರಗೋಡು ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ವಿನೋದ್ ರಾಜ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಕೇಶ್ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಕಾಸರಗೋಡು ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಬು ಕೆ ವಂದಿಸಿದರು.

           ಬಳಿಕ ಸಂಪನ್ಮೂಲ ವ್ಯಕ್ತಿ ಶ್ರೀ ಶ್ರೀನಿವಾಸ್ ರಾವ್ ಪಿ. ಬಿ ತರಬೇತಿ ನಡೆಸಿಕೊಟ್ಟರು. ಮಂಜೇಶ್ವರ ಉಪಜಿಲ್ಲಾ ಸಮಿತಿಯ ಕೋಶಾಧಿಕಾರಿ ಜೀವನ್ ಕುಮಾರ್ ಸಹಕರಿಸಿದರು. ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಮಾಧ್ಯಮ ಶಿಕ್ಷಕ - ಶಿಕ್ಷಕಿಯರು ಈ ತರಬೇತಿಯ ಸದುಪಯೋಗವನ್ನು ಪಡೆದರು. ಮುಂದಿನ ದಿನಗಳಲ್ಲಿ ಈ ತರಬೇತಿಯನ್ನು ಮುಂದುವರಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ.








Friday, 11 March 2022

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ

         ಕಾಸರಗೋಡು ಭಾಷಾ ಅಲ್ಪಸಂಖ್ಯಾತರ ಪ್ರದೇಶವಾಗಿದ್ದು ಇಲ್ಲಿನ ಕನ್ನಡಿಗರುಇದರ ಸಾಂವಿಧಾನಿಕ ಹಕ್ಕನ್ನು ಪಡೆದವರಾಗಿರುವರು. ಆದರೂ ಇಲ್ಲಿನ ಕನ್ನಡಿಗರು ತಮ್ಮ ಹಕ್ಕುಗಳ ಸಂರಕ್ಷಣೆಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಈಗಲೂ ಒಂದಿಲ್ಲೊಂದು ಸಮಸ್ಯೆಗಳು ಉದ್ಭವಿಸುತ್ತಲೇ ಇವೆ. ಕಾಸರಗೋಡಿನ ಕನ್ನಡಿಗರ ಸಂಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನಿರಂತರವಾಗಿ ಸಹಕಾರವನ್ನು ಕೊಟ್ಟಿರುತ್ತದೆ.

          ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ, ಅಧ್ಯಾಪಕರು ಹಾಗೂ ಮಕ್ಕಳ ಹೋರಾಟದ ಬದುಕಿಗೆ ಸದಾ ಸ್ಪಂದಿಸುತ್ತಿರುವ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಇಂದು ಕಾಸರಗೋಡು ಜಿಲ್ಲೆಗೆ ಆಗಮಿಸಿದ ಕರ್ನಾಟಕ ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸಿ ಸೋಮಶೇಖರರವರನ್ನು ಭೇಟಿಯಾಗಿ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ ಕುರಿತಾದ ಸಮಸ್ಯೆಗಳಿಗೆ ಸ್ಪಂದಿಸಲು ಮನವಿ ಸಲ್ಲಿಸಲಾಯಿತು. ಸಂಘಟನೆಯ ಅವಹಾಲನ್ನು ಸ್ವೀಕರಿಸಿದ ಮಾನ್ಯ ಸಿ ಸೋಮಶೇಖರರವರು ಧನಾತ್ಮಕವಾಗಿ ಸ್ಪಂದಿಸಿ, ಸೂಕ್ತ ಕ್ರಮಗಳ ಭರವಸೆಯನ್ನು ನೀಡಿರುತ್ತಾರೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪರವಾಗಿ ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ, ಉಪ ಕೋಶಾಧಿಕಾರಿ ಶರತ್ ಕುಮಾರ್, ಕುಂಬಳೆ ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀಶ ಪಂಜಿತ್ತಡ್ಕ, ಕಾಸರಗೋಡು ಉಪಜಿಲ್ಲಾ ಸಮಿತಿಯ ಉಪಾಧ್ಯಕ್ಷ ಹರೀಶ ಎನ್, ಕೋಶಾಧಿಕಾರಿ ವೆಂಕಟಕೃಷ್ಣ ಕೆ ಉಪಸ್ಥಿತರಿದ್ದರು.




Monday, 7 March 2022

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರ ನೇಮಕ : ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ತೀವ್ರ ಖಂಡನೆ

          ಭಾಷಾ ಅಲ್ಪ ಸಂಖ್ಯಾತರ ಪ್ರದೇಶವಾದ ಕಾಸರಗೋಡಿನಲ್ಲಿ ಸಾಂವಿಧಾನಿಕವಾಗಿ ಭಾಷಾ ಅಲ್ಪ ಸಂಖ್ಯಾತರ ಹಕ್ಕನ್ನು ಹೊಂದಿದ್ದರೂ ಕನ್ನಡಿಗರು ಅನುಭವಿಸುವ ಕಷ್ಟ ಇಂದು ನಿನ್ನೆಯದಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರ ನೇಮಕ ಈ ಹಿಂದೆ ಅನೇಕ ಬಾರಿ ನಡೆದು, ತೀವ್ರ ಪ್ರತಿರೋಧ ಎದುರಿಸಿದರೂ ಇದೀಗ ಮತ್ತೆ ಕನ್ನಡೇತರ ಅಧ್ಯಾಪಕರ ನೇಮಕವನ್ನು ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

          ಅಂಗಡಿಮೊಗರು ಸರಕಾರಿ ಪ್ರೌಢ ಶಾಲೆಯ ಕನ್ನಡ ವಿಭಾಗಕ್ಕೆ ಕನ್ನಡೇತರ ಅಧ್ಯಾಪಕರ ನೇಮಕದ ಆದೇಶ ಆಗಿದ್ದು, ಈ ಬಗ್ಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಶಾಲೆಗೆ ಭೇಟಿ ನೀಡಿ, ಈ ನೇಮಕಾತಿಯ ವಿರುದ್ಧ ತೀವ್ರವಾಗಿ ಖಂಡನೆಯನ್ನು ವ್ಯಕ್ತಪಡಿಸಿತು. ಈ ಹಿಂದೆ ಆದ ಇಂತಹ ನೇಮಕಾತಿಗಳ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಮತ್ತೆ ಇಂತಹ ನೇಮಕಾತಿಯನ್ನು ಮಾಡುವ ಮೂಲಕ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಮತ್ತೊಮ್ಮೆ ಕಸಿದುಕೊಂಡಂತಾಗಿದೆ, ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಕನ್ನಡ ಮಕ್ಕಳ ಭವಿಷ್ಯವನ್ನು ಕಾಪಾಡಬೇಕೆಂದು ಆಗ್ರಹಿಸಿದೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ, ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪದ್ಮಾವತಿ ಎಂ, ಕುಂಬಳೆ ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಎಸ್, ಕೋಶಾಧಿಕಾರಿ ಶರತ್ ಕುಮಾರ್, ಸದಸ್ಯರಾದ ನಯನ ಪ್ರಸಾದ್ ಎಚ್. ಟಿ, ಗುರುರಾಜ್ ಮೊದಲಾದವರು ಒಳಗೊಂಡ ನಿಯೋಗವು ಶಾಲೆಗೆ ಭೇಟಿ ನೀಡಿ, ನೇಮಕಾತಿಯನ್ನು ತಡೆ ಹಿಡಿಯಲು ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದೆ.




Sunday, 20 February 2022

ಮಂಜೇಶ್ವರ ಶಾಸಕರಿಗೆ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಕೆ

         ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳು ಇಂದು ನಿನ್ನೆಯದಲ್ಲ. ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಅವಿರತ ಪ್ರಯತ್ನಗಳು ಈಗಲೂ ನಡೆಯುತ್ತಾ ಇವೆ. ಕಾಸರಗೋಡಿನಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸಲು ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳ ಪಾತ್ರ ಪ್ರಮುಖವಾದುದು. ಆದರೆ ಕನ್ನಡ ಮಾಧ್ಯಮದ ಶಾಲೆಗಳ ಅಧ್ಯಾಪಕರು ಹಾಗೂ ಮಕ್ಕಳು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿರುತ್ತಾರೆ.
        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಇಂದು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ ಕೆ ಎಂ ಅಶ್ರಫ್ ಅವರನ್ನು ಭೇಟಿ ಮಾಡಿ, ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ ಅಧ್ಯಾಪಕರು ಹಾಗೂ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿ, ಅದಕ್ಕೆ ಸೂಕ್ತವಾದ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಮನವಿಯನ್ನು ಸಲ್ಲಿಸಲಾಯಿತು. ಶಾಸಕರು ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಭರವಸೆ ನೀಡಿದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ಪಿ ಬಿ, ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಸದಸ್ಯರಾದ ಶ್ರೀ ಜಬ್ಬಾರ್ ಬಿ ತುರ್ತಾಗಿ ಶಾಸಕರನ್ನು ಕಂಡು ಮನವಿಯನ್ನು ಸಲ್ಲಿಸಿದರು.



Monday, 13 December 2021

2021-22 ನೇ ಸಾಲಿನ ಪದಾಧಿಕಾರಿಗಳು

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ (ರಿ.) ಕಾಸರಗೋಡು

2021-22 ನೇ ಸಾಲಿನ ಪದಾಧಿಕಾರಿಗಳು:

ಅಧ್ಯಕ್ಷರು:
* ಶ್ರೀನಿವಾಸ ರಾವ್, ಮುಖ್ಯೋಪಾಧ್ಯಾಯರು, ಬಾಕ್ರಬೈಲ್ ಎ. ಯು. ಪಿ ಶಾಲೆ ಪಾತೂರು.
ಉಪಾಧ್ಯಾಕ್ಷರು:
1) ಸುಕೇಶ ಎ. ಮುಖ್ಯೋಪಾಧ್ಯಾಯರು, ಸರಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಮಂಜೇಶ್ವರ
2) ಪ್ರಭಾವತಿ ಕೆದಿಲಾಯ, ಎನ್. ಎಚ್. ಎಸ್.ಎಸ್ ಪೆರಡಾಲ

ಪ್ರಧಾನ ಕಾರ್ಯದರ್ಶಿ:
* ಜಯಪ್ರಶಾಂತ್ ಪಾಲೆಂಗ್ರಿ, ಜಿ. ಎಲ್. ಪಿ ಶಾಲೆ ಕುಳೂರು
ಕಾರ್ಯದರ್ಶಿ:
1) ನವೀನ್ ಕುಮಾರ್, ಜಿ. ಎಚ್.ಎಸ್.ಎಸ್ ಬೆಳ್ಳೂರು
2) ಪ್ರದೀಪ್ ಕೆ.ವಿ. ಎ.ಯು. ಪಿ ಶಾಲೆ, ಬೋವಿಕಾನ

ಸಂಘಟನಾ ಕಾರ್ಯದರ್ಶಿ:
* ಪ್ರದೀಪ್ ಕುಮಾರ್ ಶೆಟ್ಟಿ, ಎ. ಎಲ್. ಪಿ ಶಾಲೆ ಕಿಳಿಂಗಾರ್

ಕೋಶಾಧಿಕಾರಿ:
* ಪದ್ಮಾವತಿ ಎಂ, ಮುಖ್ಯೋಪಾಧ್ಯಾಯಿನಿ, ಜಿ.ಎಲ್. ಪಿ ಶಾಲೆ ಬಡಾಜೆ
ಜತೆ ಕೋಶಾಧಿಕಾರಿ :
* ಶರತ್ ಕುಮಾರ್, ಎ. ಎಸ್. ಬಿ. ಎಸ್ ಕುಂಟಿಕಾನ

ಅಧಿಕೃತ ವಕ್ತಾರರು:
* ರವೀಂದ್ರನಾಥ ಬಳ್ಳಾಲ್, ಜಿ. ಎಚ್.ಎಸ್.ಎಸ್ ಪೈವಳಿಕೆ ನಗರ

ಲೆಕ್ಕ ಪರಿಶೋಧಕರು:
1) ಪುರುಷೋತ್ತಮ ಕುಲಾಲ್, ಎ. ಎಲ್. ಪಿ ಎಸ್ ಪನೆಯಾಲ
2) ಹರಿಕೃಷ್ಣ ಭಟ್, ಎ.ಯು. ಪಿ. ಎಸ್ ಕಲ್ಲಕಟ್ಟ

Sunday, 12 December 2021

2021-22 ನೇ ಸಾಲಿನ ಮಹಾಸಭೆ : ನೂತನ ಪದಾಧಿಕಾರಿಗಳ ಪದಗ್ರಹಣ

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ಮಹಾಸಭೆಯು ತಾ. 12-12-2021 ನೇ ರವಿವಾರದಂದು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನದಲ್ಲಿ ನಡೆಯಿತು.

         ಮಹಾಸಭೆಯನ್ನು ನಿವೃತ್ತ ಅಧ್ಯಾಪಕ, ನಿಕಟ ಪೂರ್ವ ಕನ್ನಡ ಅಧ್ಯಾಪಕರ ಸಂಘದ ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕ್ಕಳ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾದ ರವೀಂದ್ರನಾಥ ಬಲ್ಲಾಳ್ ರವರು ವಹಿಸಿದ್ದರು. ಕೇಂದ್ರ ಸಮಿತಿಯ ಕಾರ್ಯದರ್ಶಿ ಸುಕೇಶ್ ಎ, ಕೋಶಾಧಿಕಾರಿ ಪದ್ಮಾವತಿ ಎಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾಸರಗೋಡು ಘಟಕಕ್ಕೆ ಅಧ್ಯಕ್ಷರಾಗಿ ಮರು ನೇಮಕಗೊಂಡ ಎಸ್.ವಿ ಭಟ್ ಇವರನ್ನು ಸಂಘಟನೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

        ಕೇಂದ್ರ ಸಮಿತಿಯ ಕಾರ್ಯದರ್ಶಿ ಸುಕೇಶ್ ಎ ರವರು ವರದಿ ವಾಚಿಸಿ, ಕೋಶಾಧಿಕಾರಿ ಪದ್ಮಾವತಿ ಎಂ ಲೆಕ್ಕ ಪತ್ರ ಮಂಡಿಸಿದರು.

        ಬಳಿಕ 2021-22 ನೇ ಸಾಲಿನ ನೂತನ ಕೇಂದ್ರ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಬಾಕ್ರಬೈಲ್ ಎ. ಯು. ಪಿ ಶಾಲೆ ಪಾತೂರಿನ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ರಾವ್ ಆಯ್ಕೆಯಾದರು. ಉಪಾಧ್ಯಾಕ್ಷರಾಗಿ ಸರಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಮಂಜೇಶ್ವರದ ಮುಖ್ಯೋಪಾಧ್ಯಾಯರಾದ ಸುಕೇಶ ಎ ಹಾಗೂ ಎನ್. ಎಚ್. ಎಸ್.ಎಸ್ ಪೆರಡಾಲದ ಶಿಕ್ಷಕಿ ಪ್ರಭಾವತಿ ಕೆದಿಲಾಯ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಎಲ್. ಪಿ ಶಾಲೆ ಕುಳೂರಿನ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ, ಕಾರ್ಯದರ್ಶಿಗಳಾಗಿ ಜಿ.ಎಚ್.ಎಸ್.ಎಸ್ ಬೆಳ್ಳೂರಿನ ಶಿಕ್ಷಕ ನವೀನ್ ಕುಮಾರ್ ಹಾಗೂ ಎ.ಯು. ಪಿ ಶಾಲೆ, ಬೋವಿಕಾನದ ಶಿಕ್ಷಕ ಪ್ರದೀಪ್ ಕೆ.ವಿ, ಸಂಘಟನಾ ಕಾರ್ಯದರ್ಶಿಯಾಗಿ ಎ. ಎಲ್. ಪಿ ಶಾಲೆ ಕಿಳಿಂಗಾರಿನ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಜಿ.ಎಲ್. ಪಿ ಶಾಲೆ ಬಡಾಜೆಯ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಎಂ, ಜತೆ ಕೋಶಾಧಿಕಾರಿಯಾಗಿ ಎ. ಎಸ್. ಬಿ. ಎಸ್ ಕುಂಟಿಕಾನದ ಶಿಕ್ಷಕ ಶರತ್ ಕುಮಾರ್, ಅಧಿಕೃತ ವಕ್ತಾರರಾಗಿ ಜಿ. ಎಚ್.ಎಸ್.ಎಸ್ ಪೈವಳಿಕೆ ನಗರದ ಶಿಕ್ಷಕ ರವೀಂದ್ರನಾಥ ಬಳ್ಳಾಲ್, ಲೆಕ್ಕ ಪರಿಶೋಧಕರಾಗಿ ಎ. ಎಲ್. ಪಿ ಎಸ್ ಪನೆಯಾಲದ ಶಿಕ್ಷಕ ಪುರುಷೋತ್ತಮ ಕುಲಾಲ್ ಹಾಗೂ ಎ.ಯು. ಪಿ. ಎಸ್ ಕಲ್ಲಕಟ್ಟದ ಶಿಕ್ಷಕ ಹರಿಕೃಷ್ಣ ಭಟ್ ಆಯ್ಕೆಯಾದರು.

         ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ಸ್ವಾಗತಿಸಿ, ಕೋಶಾಧಿಕಾರಿ ಪದ್ಮಾವತಿ ಎಂ ವಂದಿಸಿದರು. ಕೇಂದ್ರ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.